ರಾತ್ರಿ ತಿಂಗಳ ಬೆಳಕಿತ್ತು.
ತಿಂಗಳ ಬೆಳಕೆಂದರೆ ಚಿರಾಯುವಿಗೆ ಇಷ್ಟ. ಆ ಬೆಳಕಿನಲ್ಲಿ ಯಾವುದೂ ನಿಚ್ಚಳವಾಗಿ ಕಾಣಿಸುವುದಿಲ್ಲ. ಜಗತ್ತಿನ ಕುರೂಪಗಳನ್ನೆಲ್ಲ ಮುಚ್ಚುವ ಶಕ್ತಿ ಬೆಳದಿಂಗಳಿಗಿದೆ. ಅಷ್ಟೇ ಅಲ್ಲ, ಅದು ಎಲ್ಲವನ್ನೂ ಒಂದೇ ಬಣ್ಣಕ್ಕೆ ತಿರುಗಿಸುತ್ತದೆ. ಕಮ್ಯೂನಿಸಂ ಬಿಟ್ಟರೆ ಹಾಗೆ ಒಂದೇ ಬಣ್ಣಕ್ಕೆ ತಿರುಗಿಸುವ ಶಕ್ತಿಯಿರುವುದು ಬೆಳದಿಂಗಳಿಗೆ ಮಾತ್ರ ಅನ್ನುವುದು ಹೊಳೆದು ಚಿರಾಯು ಸಣ್ಣಗೆ ನಕ್ಕ.
ಆ ಬೆಳದಿಂಗಳಲ್ಲಿ ನಡೆಯುತ್ತಿದ್ದ ರಾತ್ರಿಗಳು ನೆನಪಾದವು. ಜೊತೆಗೆ ಚಿಕ್ಕಮ್ಮ ಭಾಗೀರಥಿ ಇರುತ್ತಿದ್ದರು. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಅದೆಲ್ಲಿಂದಲೋ ಶಶಿಧರ ಪ್ರತ್ಯಕ್ಷವಾಗುತ್ತಿದ್ದ. ಅವನು ಬರುತ್ತಿದ್ದ ಹಾಗೆ ಚಿಕ್ಕಮ್ಮ ತನ್ನ ಕೈಗೆ ಒಂದಷ್ಟು ಕಡಲೇಬೀಜ ತುರುಕಿ ಸ್ವಲ್ಪ ಮುಂದೆ ನಡೆಯೋ ಅನ್ನುತ್ತಿದ್ದಳು. ಯಾಕೆ ಅಂತಲೂ ಕೇಳದೇ ತಾನು ಮುಂದಕ್ಕೆ ಹೋಗಿ ಬಿಡುತ್ತಿದ್ದೆ. ಚಿಕ್ಕಮ್ಮನೂ ಶಶಿಧರನೂ ತನ್ನನ್ನು ಹುಂಬ ಅಂದುಕೊಳ್ಳುತ್ತಿದ್ದರೋ ಏನೋ. ಆದರೆ ತನಗೆ ಆಗಲೇ ಎಲ್ಲಾ ಅರ್ಥವಾಗುತ್ತಿತ್ತಲ್ಲ. ಅವರು ಕೈ ಕೈ ಹಿಡಿದುಕೊಂಡು ನಡೆಯುತ್ತಿದ್ದದ್ದು, ಮಾತಾಡುತ್ತಾ ಆಡುತ್ತಾ ಒಬ್ಬರಿಗೊಬ್ಬರು ಆತುಕೊಂಡು ನಡೆಯುತ್ತಿದ್ದದ್ದು, ಚಿಕ್ಕಮ್ಮ ಸಣ್ಣಗೆ ನರಳುತ್ತಿದ್ದದ್ದು, ಒಮ್ಮೆಯೂ ಅವರೇನು ಮಾಡುತ್ತಿದ್ದಾರೆ ಅಂತ ತಿರುಗಿ ನೋಡುವ ಕುತೂಹಲ ಕೂಡ ಹುಟ್ಟಿರಲಿಲ್ಲ ತನ್ನಲ್ಲಿ. ಅದಕ್ಕಿಂತ ಹೆಚ್ಚಾಗಿ ಅವರೇನು ಮಾಡುತ್ತಿದ್ದಾರೆ ಅನ್ನುವುದು ಸ್ಪಷ್ಟವಾಗಿ ಗೊತ್ತಿದೆ ಎಂಬ ದುರಹಂಕಾರ. ಇವತ್ತಿಗೂ ಅದೇ ದುರಹಂಕಾರವೇ ತನ್ನನ್ನು ಆಳುತ್ತಿದೆಯಾ. ಸಾಹಿತಿಗೆ ವಿನಯ ಇರಬೇಕು ಎಂದು ಅನೇಕರು ಹೇಳಿದ್ದು ನೆನಪಾಗಿ ಚಿರಾಯು ತನ್ನಷ್ಟಕ್ಕೇ ವಿನಯವಂತೆ ವಿನಯ, ಬದನೆಕಾಯಿ ಎಂದು ಉಸುರಿಕೊಂಡ.
ಬೆಳದಿಂಗಳು ಎಲ್ಲವನ್ನೂ ಅರಗಿಸಿಕೊಂಡಂತೆ ಹಬ್ಬಿತ್ತು. ಚಂದ್ರನಿಗೇನಾದರೂ ಕತೆ ಬರೆಯುವುದು ಗೊತ್ತಿದ್ದರೆ ಎಂತೆಂಥಾ ಕತೆ ಹೇಳುತ್ತಿದ್ದನೋ ಏನೋ. ತುಂಬ ರೋಮ್ಯಾಂಟಿಕ್ ಶೈಲಿಯಲ್ಲೊಂದು ಕಾದಂಬರಿ ಬರೆದರೆ ಹೇಗೆ. ಅಖಂಡ ಪ್ರೇಮವನ್ನು, ಅಪೂರ್ವ ಸಮಾಗಮವನ್ನು, ಸುರತದ ಸಂಭ್ರಮಗಳನ್ನು, ಸಲ್ಲಾಪಗಳನ್ನು, ರಕ್ತಸಿಕ್ತ ರಾತ್ರಿಗಳನ್ನು, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ಹಾದರ, ಮೈಥುನ, ಪ್ರಣಯೋತ್ಸವ, ವಿರಹ ಎಲ್ಲವನ್ನೂ ಕಂಡರೂ ಚಂದ್ರ ತನ್ನ ನಗುವನ್ನು ಕಳಕೊಂಡಿಲ್ಲ ಅನ್ನುವುದೇ ಬದುಕುವುದಕ್ಕೆ ಸಕಾರಣ ಎಂದು ಕಾದಂಬರಿ ಆರಂಭಿಸಿ ಎಲ್ಲರನ್ನು ಬೆಚ್ಚಿಬೀಳಿಸಿದರೆ ಹೇಗೆ, ಬೆಳದಿಂಗಳ ಕತೆಗಳು ಅಂತ ಒಂದು ಸರಣಿ ಬರೆಯಬೇಕು. ಚಂದ್ರ ಹೇಳಿದ ಕತೆಗಳಾಗಿ ಅವು ಕಾಣಿಸಬೇಕು. ಹೀಗೆ ಯೋಚನೆ ದಿಕ್ಕು ತಪ್ಪುತ್ತಿರುವುದನ್ನು ಗಮನಿಸಿ ಚಿರಾಯುವಿಗೆ ಬೇಜಾರಾಯಿತು.
ಒಂದು ಸಾಲು ಸಿಕ್ಕರೆ ಕವಿತೆ ಬರೆದುಬಿಡುತ್ತೇನೆ ಅನ್ನುತ್ತಿದ್ದ ಗೆಳೆಯ ಗೋಪಿ. ಮೊದಲ ಸಾಲು ಹೊಳೆದರೆ ಸಾಕು ಕತೆ ತಾನಾಗೇ ಬೆಳೆಯುತ್ತಾ ಹೋಗುತ್ತದೆ ಅಂತ ನಾನು ಹೇಳುತ್ತಿದ್ದೆ. ಯಾವತ್ತೂ ಕತೆ ಬರೆಯುವುದಕ್ಕೆ ತಿಣುಕಿದವನೇ ಅಲ್ಲ. ಪೆನ್ನು ಪೇಪರು ಮುಂದಿಟ್ಟು ಕೂತರೆ ಹದಿನಾಲ್ಕು ಪುಟದ ಕತೆ ಬರೆದು ಮುಗಿಸಿಯೇ ಏಳುತ್ತಿದ್ದದ್ದು. ಅದನ್ನು ಯಾವತ್ತೂ ಮತ್ತೊಮ್ಮೆ ಓದಿದ್ದೂ ಇಲ್ಲ, ತಿದ್ದಿದ್ದೂ ಇಲ್ಲ. ಹಾಗೆ ತಿದ್ದುವವರನ್ನು ಕಂಡರೆ ಅಸೂಯೆ ಮತ್ತು ರೇಜಿಗೆ. ಬರಹವೆಂದರೆ ಸಂಭೋಗದ ಹಾಗೆ. ಆ ಕ್ಷಣಕ್ಕೆ ಮದನ ಎಷ್ಟು ಕರುಣಿಸುತ್ತಾನೋ ಅಷ್ಟು.
ಒಳಗೆ ಮೊಬೈಲು ಗುನುಗುನಿಸಿತು. ಯಾಮಿನಿಗೆ ಇಷ್ಟವಾದ ಹಾಡು ರಿಂಗ್-ಟೋನು. ಅವಳನ್ನು ನೆನಪಿಸಿಕೊಳ್ಳಲು ಎಷ್ಟೊಂದು ಮಾರ್ಗ. ರಿಂಗ್-ಟೋನು, ಸ್ಕ್ರೀನ್ ಸೇವರು, ಅವಳೇ ಕೊಟ್ಟ ವಾಚು.ಹಿಂದಿನ ಕಾಲದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಇಷ್ಟೊಂದು ಮಾರ್ಗಗಳೇ ಇರಲಿಲ್ಲ. ತನ್ನ ಬಾಲ್ಯದಲ್ಲೇನಿತ್ತು. ತುಂಬ ಭಾವುಕವಾಗಿ ಯೋಚಿಸಿದರೆ ಅವಳ ಜುಮುಕಿ, ಕಾಲುಗೆಜ್ಜೆ, ಉಂಗುರ- ಇಷ್ಟನ್ನು ಬಿಟ್ಟರೆ ಬೇರೆ ರೂಪಕಗಳೇ ಇರಲಿಲ್ಲ. ಅವಳು ಕಿಟಿಕಿಯಿಂದಲೋ ಬಾಗಿಲ ಸಂದಿಯಿಂದಲೋ ನೋಡುತ್ತಿರುವ ಚಿತ್ರ, ಮುಟ್ಟಾದಾಗ ಮೊಣಕಾಲಿಗೆ ಕೈ ಊರಿ ಕೂತ ಚಿತ್ರ. ಈಗ ರಹಸ್ಯಗಳೇ ಇಲ್ಲ.
ಶೇಷು ಫೋನ್ ತಂದು ಕೊಟ್ಟ. ಶ್ರದ್ಧಾ ಫೋನ್ ಮಾಡಿದ್ದಳು. ಕಾದಂಬರಿಯ ಸಾರಾಂಶ ಹೇಳಿದರೆ ತ್ರಿಲೋಕನ ಹತ್ತಿರ ಕವರ್ ಪೇಜ್ ಡಿಸೈನ್ ಮಾಡಿಸಿಬಿಡುತ್ತೇನೆ. ಈಗಿಂದೀಗಲೇ ಪ್ರಚಾರ ಶುರು ಮಾಡಿದರೆ ಚೆನ್ನಾಗಿರುತ್ತೆ. ಒಂದು ಹೈಪ್ ಕ್ರಿಯೇಟ್ ಆಗಬೇಕು. ನಿನ್ನೆ ಟೀವಿ ನೋಡಿದ್ಯಾ ಕೇಳಿದಳು. ಇಲ್ಲ ಅಂತ ಚಿರಾಯು. ನೋಡಬೇಕಿತ್ತು. ಬಿಬಿಸಿಯಲ್ಲಿ ನಿನ್ನ ಅಜ್ಞಾತವಾಸದ ಬಗ್ಗೆ ಒಂದು ರಿಪೋರ್ಟು ಬಂದಿತ್ತು. ಎಲ್ಲೋ ಕೂತು ಕಾದಂಬರಿ ಬರೆಯುತ್ತಿದ್ದೀಯ ಅಂತ ಸುದ್ದಿ ಮಾಡಿದ್ದಾರೆ ಅಂದಳು.
ಚಿರಾಯುವಿಗೆ ರೇಗಿತು. ಕಾದಂಬರಿಯ ಸಾರಾಂಶ ಹಾಗೆಲ್ಲ ಹೇಳುವುದಕ್ಕಾಗೋಲ್ಲ. ಏನಂತ ತಿಳ್ಕೊಂಡಿದ್ದೀಯಾ ಅಂತ ಬೈಯಬೇಕು ಅಂದುಕೊಂಡ. ಮನಸ್ಸಾಗಲಿಲ್ಲ. ಶ್ರದ್ಧಾ ಪಕ್ಕಾ ಪ್ರೊಫೆಷನಲ್. ಅವಳಿಗೆ ಸೃಜನಶೀಲ ಸಂಕಟಗಳ ಬಗ್ಗೆ ಗೊತ್ತಿಲ್ಲ. ನಿಮಿಷಕ್ಕೆ ನಲವತ್ತು ಪದ ಟೈಪ್ ಮಾಡಬಲ್ಲವನು ಗಂಟೆಗೆ 2400 ಪದ ಟೈಪ್ ಮಾಡುತ್ತಾನೆ. ದಿನಕ್ಕೆ ನಾಲ್ಕು ಗಂಟೆ ಬರೆದರೂ ಸುಮಾರು ಹತ್ತು ಸಾವಿರ ಪದಗಳಾಗುತ್ತವೆ. ಒಂದು ಕಾದಂಬರಿಗೆ ಹೆಚ್ಚೆಂದರೆ ಅರುವತ್ತು ಸಾವಿರ ಪದಗಳಿದ್ದರೆ ಸಾಕು. ಯೋಚಿಸಿ ಬರೆದರೂ ಇಪ್ಪತ್ತು ದಿನಗಳಲ್ಲಿ ಕಾದಂಬರಿ ಮುಗಿಯಬೇಕು. ಕಲಾವಿದರು ಚಿತ್ರ ಮಾಡುವುದಕ್ಕೆ ಹೆಚ್ಚು ಸಮಯ ತಗೊಳ್ಳುತ್ತಾರೆ. ಹೀಗೆ ಲೆಕ್ಕಾ ಹಾಕುತ್ತಾಳೆ ಅವಳು.
ಕೊನೆಗೆ ಹೋಗ್ಲಿ ಬಿಡೋ ಟೈಟಲ್ಲಾದ್ರೂ ಹೇಳು ಅಂದಳು. ಪ್ಲೀಸ್, ಒಂದೆರಡು ದಿನ ಏನೂ ಕೇಳಬೇಡ. ಕಾದಂಬರಿ ಹರಳುಗಟ್ಟುತ್ತಾ ಇದೆ. ನಾನೇ ಫೋನ್ ಮಾಡಿ ಹೇಳ್ತೀನಿ. ಪ್ರಚಾರ ಎಲ್ಲಾ ಮಾಡಿಸೋದಕ್ಕೆ ಹೋಗಬೇಡ ಅಂತ ಗೋಗರೆಯುವ ದನಿಯಲ್ಲಿ ಹೇಳಿದ ಚಿರಾಯು. ಶ್ರದ್ಧಾ ಅರ್ಥ ಮಾಡಿಕೊಂಡವಳಂತೆ ಸರಿ ಡಾರ್ಲಿಂಗ್. ನಿಧಾನಕ್ಕೆ ಬರಿ. ನಾನೇನೂ ಅವಸರ ಮಾಡೋಲ್ಲ ಅಂದಳು.
ಶೇಷು ಕೈಗೆ ಫೋನ್ ಕೊಡುತ್ತಾ ಇನ್ನು ಮೇಲೆ ಯಾರ ಫೋನ್ ಬಂದರೂ ನನಗೆ ಕೊಡಬೇಡ. ಅವರ ಹೆಸರು ಬರೆದಿಡು. ಒಂದು ಹೊತ್ತಲ್ಲಿ ನಾನೇ ಅವರಿಗೆ ಫೋನ್ ಮಾಡಿ ಮಾತಾಡ್ತೀನಿ ಅಂದ. ಶೇಷು ತಲೆಯಾಡಿಸಿದ.
ಮೋಡವೊಂದು ಚಂದ್ರನನ್ನು ಮರೆ ಮಾಡಿದ್ದರಿಂದಲೋ ಏನೋ ಬೆಳದಿಂಗಳು ಮಸುಕಾಗಿತ್ತು. ಗುಡ್ಡ ಬಯಲು ಒಂದಾಗಿತ್ತು. ಮತ್ತಷ್ಟು ನಿಗೂಢವಾಗಿತ್ತು. ಬೆಳದಿಂಗಳಿಗಿಂತ ಒಳ್ಳೆಯ ಕತೆಯಾಗಲೀ ಕವಿತೆಯಾಗಲೀ ಇರುವುದಕ್ಕೆ ಸಾಧ್ಯವೇ ಇಲ್ಲ ಅಂದುಕೊಳ್ಳುತ್ತಾ ಚಿರಾಯು ಎದ್ದು ನಿಂತ.
ಇದ್ದಕ್ಕಿದ್ದಂತೆ ಬೆಳದಿಂಗಳಲ್ಲಿ ಭಾಗೀರಥಿ ಚಿಕ್ಕಮ್ಮ ನಡೆದಾಡಿದಂತೆ ಕಾಣಿಸಿತು. ಶಶಿಧರ ಜೊತೆಗಿರಲಿಲ್ಲ.
ಮೈಯೆಲ್ಲ ಕಂಪಿಸಿದಂತಾಗಿ ಚಿರಾಯು ತಿರುಗಿ ನೋಡಿದ. ಮನೆಯೊಳಗೆ ಕತ್ತಲಿತ್ತು.