Wednesday, April 23, 2008

7. ರೋಹಿಣಿಯು ಬೆಳಗುವಳು ಸನ್ನಿಧಿಯಲಿ..

ಕುಂದಾಪುರದಿಂದ ಮೂವತ್ತೋ ನಲುವತ್ತೋ ಕಿಲೋಮೀಟರ್ ದೂರದಲ್ಲಿ ಕಮಲಶಿಲೆ. ಕಮಲಶಿಲೆಯಲ್ಲೊಂದು ದೇವಸ್ಥಾನ. ದೇವಸ್ಥಾನದಿಂದ ಆರೇಳು ಮೈಲಿ ದೂರದಲ್ಲೆಲ್ಲೋ ಅವಳ ಮನೆ. ಮನೆಗೆ ನಡೆದುಕೊಂಡೇ ಹೋಗಬೇಕು. ಹಳೆಯ ಕಾಲದ ಉಪ್ಪರಿಗೆಯಿರುವ ಮನೆ. ಅಂಗಳದಲ್ಲಿ ಆರೆಂಟು ಮಾರು ದಾಟಿದರೆ ಅಲ್ಲೊಂದು ದನದ ಕೊಟ್ಟಿಗೆ.
ಆ ಕೊಟ್ಟಿಗೆಯಲ್ಲಿ ಬೆಳ್ಳಿಹಸುಗಳ ಹಾಲು ಕರೆಯುತ್ತಿದ್ದ ಸರಸ್ವತಿಯನ್ನೇ ಚಿರಾಯು ಮೊದಲು ನೋಡಿದ್ದು. ಚೌಕಳಿ ಸೀರೆಯನ್ನು ತೊಡೆಮಟ್ಟ ಎತ್ತಿ, ಕೊಟ್ಟಿಗೆಗೆ ಯಾರೂ ಬರುವುದಿಲ್ಲ ಎಂಬ ನಂಬಿಕೆಯಲ್ಲಿ ಹಾಲು ಕರೆಯುತ್ತಾ ಕೂತಿದ್ದ ಸರಸ್ವತಿಗೆ ಚಿರಾಯು ಬಂದದ್ದು ಗೊತ್ತಾದಾಗಲೂ ಏನೂ ಅನ್ನಿಸಿರಲಿಲ್ಲ. ಆಗಿನ್ನೂ ಚಿರಾಯುವಿಗೆ ಹನ್ನೆರಡೋ ಹನ್ನೊಂದೋ?
ಬಿಂದಿಗೆ ತುಂಬ ಕೆನೆಹಾಲು ಕರೆದುಕೊಂಡು ಬಿಂದಿಗೆ ಹಿಡಿದ ಕೈಯನ್ನೇ ಚಿರಾಯುವಿನ ಕತ್ತಿನ ಸುತ್ತ ಹಾಕಿ ಸೊಂಟಕ್ಕೊತ್ತಿಕೊಂಡು ಮನೆಗೆ ಕರೆದುಕೊಂಡು ಬಂದ ಸರಸ್ವತಿಗೆ ಆಗ ಇಪ್ಪತ್ತನಾಲ್ಕು. ಮಾವನ ಮಗನ ಹೆಂಡತಿ. ಸಗಣಿ ವಾಸನೆ ಹೊಡೆಯುತ್ತಿದ್ದರೂ ಚಿರಾಯುವಿಗೆ ಹಿತವೆನ್ನಿಸಿತ್ತು. ಒಳಗೆ ಕರೆದೊಯ್ದು ಕೂರಿಸಿ ದೋಸೆ ಮಾಡಿ ಅದರ ಮೇಲೆ ಅಡಿಕೆ ಗಾತ್ರದ ಬೆಣ್ಣೆ ಹಾಕಿ ತಿನ್ನುವ ತನಕ ಪ್ರೀತಿಯಿಂದ ನೋಡುತ್ತಾ ಕೂತಿದ್ದು, ರಾತ್ರಿ ಭಯವಾಗುತ್ತೇನೋ ಎಂದು ಮೈದಡವಿ ಕೇಳಿ ತನ್ನ ಹತ್ತಿರವೇ ಮಲಗಿಸಿಕೊಂಡು ಮುಂಜಾವಗಳಲ್ಲಿ ಅವಳೂ ಪುಟ್ಟ ಮಗುವಿನ ಹಾಗೆ ಕಾಣಿಸುತ್ತಾ, ತನ್ನ ತೋಳ ಮೇಲೆ ಮಲಗಿಕೊಂಡು ತಾನೊಬ್ಬ ಗಂಡಸು ಅನ್ನುವ ಭಾವನೆ ಹುಟ್ಟಿಸುತ್ತಾ...
ತಾನು ಗಂಡಸು ಅನ್ನುವ ಭಾವನೆಯನ್ನು ಮತ್ತೆ ಹುಟ್ಟಿಸಿದವಳು ಯಾಮಿನಿಯೇ. ಶರಟಿನ ತೋಳಿನೊಳಗೆ ಕೈ ಹಾಕಿ, ತೋಳುಗಳ ಬಿಸುಪನ್ನು ಸ್ಪರ್ಶಿಸುತ್ತಾ, ತಬ್ಬಿಕೊಂಡಾಗಲೂ ತಬ್ಬಿಕೊಳ್ಳಲಾರದಷ್ಟು ಅಗಾಧ ಎಂಬಂತೆ ನಗುತ್ತಾ, ಸಿಟ್ಟು ಬಂದಾಗ ಮೌನವಾಗಿರುತ್ತಾ, ಬೇಸರದಲ್ಲಿದ್ದಾಗ ಸಂತೈಸುತ್ತಾ, ನಿನಗೆ ನೀನೇ ಸಾಟಿ ಅನ್ನುತ್ತಾ, ಬಸವಳಿದ ಕ್ಷಣಗಳಲ್ಲೂ ಹುರುಪು ತುಂಬುತ್ತಾ, ಚಾಚಿದ ತೋಳಿನ ಮೇಲೆ ರಾತ್ರಿಯಿಡೀ ಮಲಗಿರುತ್ತಾ, ನಿದ್ದೆ ಹೋದಾಗ ನಿದ್ದೆ ಹೋದಂತೆ ನಟಿಸುತ್ತಿದ್ದಾನೆಂದು ತಪ್ಪು ತಿಳಿಯುತ್ತಾ, ನಿದ್ದೆ ಹೋದಾಗಲೂ ಅವನನ್ನೇ ನೋಡುತ್ತಾ ಕೂರುತ್ತಿದ್ದ ಯಾಮಿನಿಯಂಥ ಹೆಣ್ಣನ್ನು ಚಿರಾಯು ಕಂಡಿಲ್ಲ. ಯಾಮಿನಿ ಸಿಗದೇ ಹೋಗಿದ್ದರೆ ಒಂದು ಹಂತದಲ್ಲಿ ತಾನು ಬರೆಯುವ ಚಿಗುರುವ ಸಾಮರ್ಥ್ಯವನ್ನೇ ಕಳೆದುಕೊಂಡು ಬಿಡುತ್ತಿದ್ದೆನೇನೋ ಅನ್ನಿಸಿದಿದ್ದಿದೆ. ಅದೆಲ್ಲ ಸುಳ್ಳು ಕಣೋ, ನೀನು ಯಾರಿಗೋಸ್ಕರವೋ ಬರೆಯುವುದಿಲ್ಲ. ನಿನಗೋಸ್ಕರ ಬರೆಯತ್ತಿ. ಪ್ರತಿಯೊಬ್ಬ ಬರಹಗಾರನೂ ಸ್ವಾರ್ಥಿ. ತನಗೋಸ್ಕರವೇ ಅವನು ಬರೆಯುವುದು. ನನಗದು ಗೊತ್ತು. ಸುಮ್ಮನೆ ನನ್ನನ್ನು ನೆಪವಾಗಿಸಬೇಡ ಅನ್ನುತ್ತಿದ್ದಳು ಯಾಮಿನಿ.
ಯಾಮಿನಿಗೂ ಸರಸ್ವತಿಗೂ ಕೆಲವೊಂದು ಸಾಮ್ಯಗಳಿದ್ದವು. ಸರಸ್ವತಿಗೆ ತುಂಬ ವರುಷ ಮಕ್ಕಳಾಗಿರಲಿಲ್ಲ. ಅವಳ ಗಂಡ ದೇವರಾಯನಿಗೋ ಯಕ್ಷಗಾನದ ಹುಚ್ಚು. ಅಂಬುರುಹದಳನೇತ್ರೆ ದುರ್ಗಾಂಬಿಕೆಯ ಬಲಗೊಂಡು ಭಕ್ತಿಯಳಂಬಿಕಾಸುತ ವಿಘ್ನರಾಜನ ಪಿರಿದು ಸಂಸ್ತುತಿಸಿ, ಅಂಬುನಿಧಿಯಾತ್ಮಜೆಗೆ ಬಲಬಂದು ಅಂಬುಜಾಸನ ವಾಣಿಯರ ಪಾದಾಂಬುಜಕೆ ಪೊಡಮಡುತ ಬಣ್ಣಿಪೆನೇ ಕಥಾಮೃತವ... ಎಂದು ಏರುದನಿಯಲ್ಲಿ ಹಾಡುತ್ತಾ ಹೊರಟನೆಂದರೆ ವಾಪಸ್ಸು ಬರುವುದು ಮಾರನೆಯ ಮುಂಜಾನೆಯೋ ಎರಡು ದಿನ ಕಳೆದೋ. ಅದೇ ಊರಲ್ಲಿ ಚಿರಾಯು ತೆರೆದಷ್ಟೇ ಬಾಗಿಲು ಕತೆ ಓದಿದ್ದು. ಮಳೆಗಾಲದ ಹಗಲು ಕಟ್ಟಿಗೆ ಗೂಡಿನಲ್ಲಿ ಕುಳಿತು ಓದಿಸಿಕೊಂಡ ಆ ಕತೆಯ ವಿವರಗಳು ಚಿರಾಯುವಿಗೆ ಈಗಲೂ ನೆನಪಿದೆ. ಅದನ್ನು ಓದುತ್ತಿದ್ದ ಹಾಗೇ, ಸರಸ್ವತಿಯ ಮೇಲೆ ಅಗಾಧ ಪ್ರೀತಿ ಉಕ್ಕಿಬಂದಿತ್ತು. ದೇವರಾಯ ಅವಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾನೆ. ಹಿಂಸೆ ಕೊಡುತ್ತಿದ್ದಾನೆ ಅನ್ನಿಸಿತ್ತು. ಆ ಹಿಂಸೆಯಿಂದ ಅವಳನ್ನು ಪಾರು ಮಾಡಬೇಕು. ಪಾರು ಮಾಡಿ ದೂರ ಕರೆದುಕೊಂಡು ಹೋಗಬೇಕು. ಜಗತ್ತಿನ ಸಕಲ ಸುಖಗಳೂ ಆಕೆಗೆ ದಕ್ಕುವ ಹಾಗೆ ಮಾಡಬೇಕು.
ಹಾಗೆಲ್ಲ ಅನ್ನಿಸಿದ್ದಿದೆ ಚಿರಾಯುವಿಗೆ.
ದೇವರಾಯನೂ ಸರಸ್ವತಿಗೂ ಜೊತೆಗೆ ಮಲಗಿದ್ದನ್ನು ಚಿರಾಯು ಕಂಡಿರಲೇ ಇಲ್ಲ. ಅವನು ಬಂದಾಗ ತಟ್ಟೆಯಿಟ್ಟು ಬಡಿಸಿ, ಅವನು ಉಂಡ ನಂತರ ತಟ್ಟೆಯೆತ್ತಿ ನೆಲಸಾರಿಸಿ, ಯಾರಿಗೋ ಹೇಳುವಂತೆ ಅವನಿಗೊಂದು ಮಾತು ಹೇಳಿ, ಊರಿಗೆಲ್ಲ ಕೇಳುವಂತೆ ಅವನು ಅದಕ್ಕೆ ಉತ್ತರಿಸಿ ಅಂಬುರುಹದಳನೇತ್ರೆ... ಎಂದು ಹೊರಟು ಬಿಡುವ ಹೊತ್ತಿಗೆ, ಸರಸ್ವತಿ ತಲೆಬಾಗಿಲಿಗೂ ಬರುತ್ತಿರಲಿಲ್ಲ.
ದೇವರಾಯನ ಜೊತೆ ಸರಸ್ವತಿ ಜಗಳ ಆಡಿದಳು ಅನ್ನುವ ಸುದ್ದಿ ಬಂದಾಗ ಚಿರಾಯು ಎಂಟನೇ ಕ್ಲಾಸು ಓದುತ್ತಿದ್ದ. ಸುಮ್ಮನೆ ಸಹಿಸಿಕೊಂಡಿದ್ದ ಸರಸ್ವತಿ ಒಂದು ದಿನ ದೇವರಾಯನಿಗೆ ಕಟ್ಟಿಗೆ ತಗೊಂಡು ಸಾಯುವ ಹಾಗೆ ಬಡಿದುಹಾಕಿದಳಂತೆ ಅಂತ ಅಪ್ಪ ಅಮ್ಮನಿಗೆ ಹೇಳುತ್ತಿದ್ದರು. ಅಮ್ಮ ಒಳ್ಳೇ ಕೆಲಸ ಮಾಡಿದಳು ಅಂತ ಸರಸ್ವತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಳು. ಆ ವಯಸ್ಸಿಗೆ ತಿಳಿದದ್ದು, ಆಮೇಲೆ ಹೊಳೆದದ್ದು, ಮುಂದೆ ಅರ್ಥವಾದದ್ದು ಎಲ್ಲಾ ಸೇರಿ ಚಿರಾಯುವಿನ ಕಣ್ಮುಂದೆ ಒಂದು ಚಿತ್ರ ಮೂಡಿತ್ತು.
ದೇವರಾಯ ಮನೆಯಲ್ಲಿಲ್ಲದ ಒಂದು ರಾತ್ರಿ, ಸರಸ್ವತಿಯ ಮಾವ, ದೇವರಾಯನ ಅಪ್ಪ ಸುಬ್ಬಣ್ಣ ಮನೆಗೆ ಬಂದನಂತೆ. ದೇವರಾಯನಿಗೂ ಸುಬ್ಬಣ್ಣನಿಗೂ ಅಷ್ಟಕ್ಕಷ್ಟೇ. ತಾನು ಕಷ್ಟಪಟ್ಟು ಮಾಡಿಟ್ಟ ತೋಟವನ್ನೆಲ್ಲ ಮೇಳದ ಹಿಂದೆ ತಿರುಗಿ ಹಾಳು ಮಾಡುತ್ತಾನೆ ಅಂತ ಸುಬ್ಬಣ್ಣನಿಗೆ ಸಿಟ್ಟು. ಈ ಮಧ್ಯೆ ಕೆಳಗಿನ ತೋಟವನ್ನು ವಿರೂಪಾಕ್ಷ ನಾಟಕ ಕಂಪೆನಿಯಲ್ಲಿ ಸದಾರಮೆ ಪಾತ್ರ ಮಾಡುವ ನೀಲಾವತಿಗೆ ದೇವರಾಯ ಬರೆದುಕೊಟ್ಟಿದ್ದಾನೆ ಅನ್ನುವ ಸುದ್ದಿಯೂ ಸುಬ್ಬಣ್ಣನ ಕಿವಿಗೆ ಬಿತ್ತು. ಆ ಬಗ್ಗೆ ವಿಚಾರಿಸಿ, ಆಸ್ತಿಯ ಹಕ್ಕು ಪತ್ರ ಕೊಂಡುಹೋಗುವುದಕ್ಕೆಂದೇ ಸುಬ್ಬಣ್ಣ ಬಂದದ್ದು.
ಸುಬ್ಬಣ್ಣನಿಗೆ ಹುಟ್ಟಿದ ಮೊದಲ ಮಗ ದೇವರಾಯ. ಹದಿನೆಂಟಕ್ಕೇ ಮದುವೆಯಾಗಿದ್ದ ದೇವರಾಯ, ಹತ್ತೊಂಬತ್ತಕ್ಕೆಲ್ಲ ತಂದೆಯಾಗಿದ್ದ. ಈಗ ದೇವರಾಯನಿಗೆ ಇಪ್ಪತ್ತೊಂಬತ್ತು. ಸುತ್ತಾಡಿ, ಎಲ್ಲೆಂದರಲ್ಲಿ ಮಲಗಿ, ನಿದ್ದೆಗೆಡಿಸಿಕೊಂಡು ಸದ್ಯಕ್ಕೆ ಬಿಕಾರಿ ಥರ ಆಗಿಬಿಟ್ಟಿದ್ದ ದೇವರಾಯನಿಗಿಂತ ಸುಬ್ಬಣ್ಣನೇ ಗಟ್ಟಿಮುಟ್ಟಾಗಿದ್ದ.
ಆ ರಾತ್ರಿ ಸುಬ್ಬಣ್ಣ ಬರುವ ಹೊತ್ತಿಗೆ ಕಾಲಿಗೇನೋ ಕಚ್ಚಿತ್ತು. ಅದು ಹಾವು ಅಂತ ಸುಬ್ಬಣ್ಣನಿಗೆ ಅನುಮಾನ. ಕಚ್ಚಿದ ತಕ್ಷಣವೇ ಪಂಚೆ ಹರಿದು ಕಾಲಿಗೊಂಡು ಕಟ್ಟು ಕಟ್ಟಿಕೊಂಡೇ ಬಂದಿದ್ದ. ಮನೆಗೆ ಬಂದವನೇ ಬಿಸಿನೀರು ಕೇಳಿ, ಕುದಿಯುವ ಬಿಸಿನೀರನ್ನು ಆ ಗಾಯಕ್ಕೆ ಸುರಿದು ಚಡಪಡಿಸುತ್ತಾ ಕೂತಿದ್ದ.
ಆಮೇಲೆ ಅದು ಹೇಗಾಯಿತು ಏನಾಯಿತು ಅನ್ನುವ ವಿವರಗಳು ಚಿರಾಯುವಿಗೂ ಗೊತ್ತಿಲ್ಲ. ಅವನೊಂದು ತನ್ನ ಕಲ್ಪನೆಯಲ್ಲೇ ಒಂದು ಕತೆಯನ್ನು ಹೆಣೆಯಲು ಯತ್ನಿಸಿ ಸೋತಿದ್ದ. ಆದರೆ, ಚಿರಾಯು ಕೇಳಿದ ಅಪ್ಪ ಹೇಳಿದ ಅಪ್ಪ ಸಮರ್ಥಿಸಿಕೊಂಡ ಕತೆಯ ಪ್ರಕಾರ, ದೇವರಾಯ ಬರುವ ಹೊತ್ತಿಗೆ ಸುಬ್ಬಣ್ಣನ ಎದೆಯ ಮೇಲೆ ಸರಸ್ವತಿ ನಿದ್ದೆ ಹೋಗಿದ್ದಳು.
ಚಿರಾಯು ಹೀಗೆ ಸರಸ್ವತಿ ತನ್ನ ಮಹಾಪ್ರಸ್ಥಾನ ಕಾದಂಬರಿಯ ಪಾತ್ರವಾದದ್ದನ್ನು ನೆನಪಿಸಿಕೊಂಡು, ಅವಳಿದ್ದದ್ದು ಹಾಗೆಯಾ, ತಾನು ತೋರಿಸಿದ್ದೇ ಹಾಗೆಯಾ? ಕಾದಂಬರಿಯ ಮೂಲಕ ತಾನು ಸರಸ್ವತಿಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದೆನಾ? ಸರಸ್ವತಿಯಂಥ ಹೆಣ್ಣುಮಕ್ಕಳಿರಬೇಕು, ಆದರೆ ಅವರು ತಮ್ಮ ಮನೆಯವರಾಗಿರಬಾರದು ಎಂಬ ಭಾವನೆಯಲ್ಲೇ ಅದನ್ನು ಎಲ್ಲರೂ ಓದಿದರಾ?
ಚಿರಾಯು ಯೋಚನೆಗಳ ಭಾರ ಸಾಕಾಗಿದೆ ಎಂಬಂತೆ ಎಡಬಲಕ್ಕೆ ಕಣ್ಣು ಹೊರಳಿಸಿದ. ಶೇಷು ಕಾಣಿಸಿಕೊಳ್ಳಲಿಲ್ಲ. ತಾನೇ ಅವನನ್ನು ಬೆಂಗಳೂರಿಗೆ ಕಳಿಸಿದ್ದೇನೆ ಅನ್ನುವುದು ನೆನಪಾಯಿತು. ತಾನೇ ಯಾಕೆ ಟೀ ಮಾಡಬಾರದು ಎಂದು ಚಿರಾಯು ಅಡುಗೆ ಮನೆಗೆ ಕಾಲಿಟ್ಟ.