Tuesday, July 29, 2008

17. ಬೆನ್ನು ಹತ್ತಿದ ಭೂತ

ತನ್ನ ಪಾಲಿಗೆ ಮತ್ತೆ ಚಿಗುರಲಾರದಷ್ಟು ಗೊಡ್ಡಾಗಿರುವ ಮರ, ಹೊರನೋಟಕ್ಕೆ ಹಸಿರು ತುಂಬಿಕೊಂಡಂತೆ ಕಾಣಿಸುತ್ತದೆ. ಆದರೆ ಆ ಮರದಲ್ಲಿ ಗೂಡು ಕಟ್ಟಿರುವ ಹಕ್ಕಿಗಳಿಗೆ ಈ ಮರದ ಆಯಸ್ಸು ಮುಗಿಯುತ್ತಾ ಬಂದಿದೆ ಅಂತ ಮೊದಲೇ ಗೊತ್ತಾಗಿಬಿಡುತ್ತದೆ. ಅಂಥ ಮರಗಳಲ್ಲಿ ಹಕ್ಕಿಗಳು ಗೂಡು ಕಟ್ಟುವುದಿಲ್ಲ. ಪ್ರತಿವರ್ಷ ಗೂಡು ಕಟ್ಟುತ್ತಿದ್ದ ಗೀಜಗವೋ ಗಿಳಿಯೋ ಗೊರವಂಕವೋ ಅಲ್ಲಿ ಗೂಡು ಕಟ್ಟಿಲ್ಲ ಅಂದರೆ ಅದರ ಆಯಸ್ಸು ಮುಗಿಯಿತು ಅಂತಲೇ ಅರ್ಥ ಎಂದು ಅಜ್ಜ ಚಿಕ್ಕಂದಿನಲ್ಲಿ ಹೇಳಿದ್ದ ಮಾತು ಚಿರಾಯುವಿಗೆ ನೆನಪಾಯಿತು. ಚಿರಾಯುವಿಗೆ ಮರಗಳು ಸಾಯುತ್ತವೆ ಎಂಬ ನಂಬಿಕೆಯೂ ಇರಲಿಲ್ಲ. ಸಿಡಿಲು ಬಡಿಸಿಕೊಂಡ ಮನೆ ಮುಂದಿನ ಮಾವಿನ ಮರ ಒಂದೇ ತಿಂಗಳಿಗೆ ಒಣಗಿ ಎಲೆಯುದುರಿಸಿಕೊಂಡು ಬೋಳಾಗಿದ್ದನ್ನು ನೋಡಿದ್ದು ಬಿಟ್ಟರೆ ಸಹಜವಾಗಿ ಸತ್ತ ಮರಗಳನ್ನು ಅವನು ನೋಡಿರಲೇ ಇಲ್ಲ.
ಮರಗಳ ಹಾಗೆ ಚಿಗುರುವುದನ್ನು ಕಲಿಯಬೇಕು ಎಂದು ಅವನು ಅನೇಕ ಕಾದಂಬರಿಗಳಲ್ಲಿ ಬರೆದಿದ್ದ. ಲೇಖಕನೂ ಹಾಗೆ ಚಿಗುರುವುದಕ್ಕೆ ಸಾಧ್ಯವಾ? ಅದೊಂದು ಭ್ರಮೆ ಕಣೋ ಅಂದಿದ್ದಳು ಯಾಮಿನಿ. ಅವಳೊಬ್ಬಳೇ ಅವನ ಜೊತೆ ಹಾಗೆ ಏಕವಚನದಲ್ಲಿ ಮಾತಾಡುವುದು. ಬೇರೆಯವರ ಪಾಲಿಗೆ ಅವನು ಮಿಸ್ಟರ್ ಚಿರಾಯು, ಚಿರಾಯು ಸರ್, ಮೇಷ್ಟ್ರು, ಗುರುಗಳು. ದೊಡ್ಡ ಬರಹಗಾರ ಎಂಬ ಹೆಸರಿನಲ್ಲೇ ಲೇಖಕನ ಅರ್ಧ ಸಾಮರ್ಥ್ಯ ಸೋರಿಹೋಗುತ್ತದೆಯೇನೋ ಅನ್ನಿಸಿತು ಅವನಿಗೆ. ವಾಲಿಯ ಮುಂದೆ ನಿಂತು ಯುದ್ಧಮಾಡುವವನ ಅರ್ಧ ಶಕ್ತಿಯನ್ನು ಹೀರಿಕೊಳ್ಳುವಂಥ ಹಾರವೊಂದು ವಾಲಿಯ ಬಳಿ ಇತ್ತಂತೆ. ಹೊಗಳುಭಟರೂ ಹಾಗೇ, ಅರ್ಧ ಸೃಜನಶೀಲತೆಯನ್ನು ಕಸಿದುಕೊಂಡು ತನ್ನನ್ನು ಅದೇ ಪಂಜರದೊಳಗೆ ಬಂಧಿಯಾಗಿಸುತ್ತಾರೆ ಅನ್ನುವುದು ಚಿರಾಯುವಿಗೆ ಇದ್ದಕ್ಕಿದ್ದಂತೆ ಹೊಳೆಯಿತು.
ತನ್ನೊಳಗಿನ ತೀವ್ರತೆಯನ್ನು ಉಳಿಸಿದವಳು ಯಾಮಿನಿ ಮಾತ್ರ ಅನ್ನುವುದು ಚಿರಾಯುವಿಗೆ ನೆನಪಾಯಿತು. ಚಿರಾಯು ಬರೆದದ್ದನ್ನು ಅವಳು ಒಮ್ಮೊಮ್ಮೆ ನಿರಾಕರಿಸುತ್ತಿದ್ದಳು. ಅದೊಂದು ಅದ್ಭುತ ಚಿಂತನೆ ಎಂದು ಹೇಳಹೊರಟದ್ದನ್ನು ನಿಟ್ಟುಸಿರಲ್ಲಿ ಪಕ್ಕಕ್ಕೆ ಸರಿಸಿ, ಎಷ್ಟು ಜನ ಹೇಳಿಲ್ಲ ಇದನ್ನು. ನೀನೂ ಅದನ್ನೇ ಹೇಳಬೇಕಾ ಅನ್ನುತ್ತಿದ್ದಳು. ತನ್ನ ಮನಸ್ಸಿಗೆ ಹಿತವೆನಿಸುವಂತೆ ನಿರಾಕರಿಸಬಲ್ಲ ಶಕ್ತಿ ಅವಳೊಬ್ಬಳಿಗೇ ಇತ್ತಲ್ಲ ಅಂತ ಚಿರಾಯು ನೆನಪಿಸಿಕೊಂಡ.
ಚಿರಾಯು, ನೀನು ಯೋಚಿಸ್ತಾ ಇರೋ ರೀತೀನೇ ಸ್ಟೀರಿಯೋಟೈಪ್. ಅದರಲ್ಲೇನಿದೆ ಹೊಸತನ. ಹೊಸತನ ಇರಬೇಕು ಅಂತಲ್ಲ. ಆದರೆ ನೀನು ಹೇಳ್ತಿರೋದು ಎಷ್ಟು ಜನರಲ್ಲಿ ಆಸಕ್ತಿ ಮೂಡಿಸುತ್ತೆ ಯೋಚಿಸು ಎಂದು ತನ್ನ ಅಪೂರ್ವ ಸಿದ್ಧಾಂತಗಳನ್ನೆಲ್ಲ ಆಕೆ ತಳ್ಳಿಹಾಕಿದ್ದಳು. ಆಕೆ ಹಾಗೆ ಹೇಳಿದ ಮೇಲೂ ಅದೇ ಸಿದ್ಧಾಂತಗಳನ್ನು ಅವನು ತುಂಬಿದ ಸಭೆಯಲ್ಲಿ ಮಂಡಿಸುತ್ತಿದ್ದ. ಬಂದಿದ್ದವರು ಆದನ್ನೇ ಕೊಂಡಾಡುತ್ತಿದ್ದರು. ಆಗ ಅವನು ಅದನ್ನು ಯಾಮಿನಿಗೆ ಹೇಳಿ ಅವಳನ್ನು ರೇಗಿಸುತ್ತಿದ್ದ. ನೀನು ಬೇಡ ಅಂದಿದ್ದರ ಬಗ್ಗೆಯೇ ಮಾತಾಡಿದೆ. ಎಲ್ಲರೂ ಎಷ್ಟೊಂದು ಇಷ್ಟಪಟ್ರು ಗೊತ್ತಾ ಅನ್ನುತ್ತಿದ್ದ. ಯಾಮಿನಿ ಸುಮ್ಮನೆ ನಗುತ್ತಿದ್ದಳು.
ಆದರೆ ತಾನು ಏನು ಹೇಳಿದರೂ ಅವರು ಕೇಳಿಸಿಕೊಳ್ಳುತ್ತಾರೆ. ಏನು ಮಾತಾಡಿದರೂ ಮೆಚ್ಚಿಕೊಳ್ಳುತ್ತಾರೆ ಅನ್ನುವುದು ಅವನಿಗೆ ಗೊತ್ತಾದದ್ದು ಒಂದು ವಿಚಿತ್ರ ಸಂದರ್ಭದಲ್ಲಿ.
ಚಿರಾಯು ಶಿವಮೊಗ್ಗೆಯ ಹಳ್ಳಿಯೊಂದರ ಸ್ಕೂಲು ಉದ್ಘಾಟನೆಗೆ ಹೋಗಿದ್ದ. ಅಲ್ಲಿಗೆ ಹೋಗುವ ತನಕವೂ ತಾನೇನು ಮಾತಾಡಬೇಕು ಅನ್ನುವ ಬಗ್ಗೆ ಕಿಂಚಿತ್ತೂ ಕಲ್ಪನೆಯಿರಲಿಲ್ಲ ಅವನಿಗೆ. ಹಿಂದಿನ ರಾತ್ರಿ ಯಾಮಿನಿಗೆ ಫೋನ್ ಮಾಡಿ ಏನು ಮಾತಾಡ್ಲೇ ಎಂದು ಕೇಳಿದಾಗ ನಿನ್ನ ನೂರೆಂಟು ಸಿದ್ಧಾಂತಗಳಿವೆಯಲ್ಲ, ಅವುಗಳಲ್ಲಿ ಒಂದನ್ನು ಹೇಳು ಅಂದಿದ್ದಳು. ಆವತ್ತು ಯಾಮಿನಿಯ ಮೇಲೆ ಸಿಟ್ಟು ಬಂದಿತ್ತಾದರೂ ತೋರಿಸಿಕೊಳ್ಳದೇ ಫೋನಿಟ್ಟಿದ್ದ.
ಮಾರನೆಯ ದಿನ ಅವನು ಮಾತಾಡಿದ್ದು ಗುರುಕುಲ ಪದ್ಧತಿಯ ಬಗ್ಗೆ. ಶ್ರುತಿ ಮತ್ತು ಶ್ರೌತ್ರದ ಬಗ್ಗೆ. ಕೇಳುವುದು ಮತ್ತು ನೆನಪಿಟ್ಟುಕೊಳ್ಳುವುದರ ಬಗ್ಗೆ. ಹೇಗೆ ಮಾಹಿತಿ ಪೂರ್ಣವಾಗಿರಬೇಕು ಅನ್ನುವುದರ ಬಗ್ಗೆ. ಇನ್ ಫಾರ್ಮೇಷನ್ ಅನ್ನುವುದು ಮನುಷ್ಯನನ್ನು ಶಕ್ತಿಶಾಲಿಯನ್ನಾಗಿಸುತ್ತದೆ ಅನ್ನುವುದಕ್ಕೆ ಹಳೆಯ ಕತೆಯೊಂದನ್ನು ಉದಾಹರಿಸಿದ್ದ.
ಚಿರಾಯು ಯಾವತ್ತೋ ಓದಿದ ಕತೆ ಅದು. ಓದಿದ ಮನುಷ್ಯನೊಬ್ಬ ಕಾಡಿನಲ್ಲಿ ನರಭಕ್ಷಕರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ನರಭಕ್ಷಕರು ಮಾರನೆಯ ದಿನ ಮುಂಜಾನೆ ಸೂರ್ಯೋದಯದ ನಂತರ ಅವನನ್ನು ಕಾಳಿಗೆ ಅರ್ಪಿಸಬೇಕು ಅಂದುಕೊಂಡಿರುತ್ತಾರೆ. ತಪ್ಪಿಸಿಕೊಳ್ಳಲು ಮಾರ್ಗಗಳನ್ನು ಹುಡುಕುತ್ತಾ ಕೂತವನಿಗೆ ಮಾರನೆಯ ದಿನ ಸೂರ್ಯಗ್ರಹಣ ಅನ್ನುವುದು ನೆನಪಾಗುತ್ತದೆ. ಆತ ಕಾಡುಮನುಷ್ಯನನ್ನು ಕರೆದು ಮಾರನೆಯ ಬೆಳಗ್ಗೆ ಸೂರ್ಯೋದಯ ತಡವಾಗಿ ಆಗುತ್ತದೆ. ಸೂರ್ಯದೇವನಿಗೆ ನನ್ನನ್ನು ಬಲಿಕೊಡುವುದು ಇಷ್ಟವಿಲ್ಲ ಅನ್ನುತ್ತಾನೆ. ಸೂರ್ಯಗ್ರಹಣವಾದ್ದರಿಂದ ಆತ ಹೇಳಿದಂತೆಯೇ ಆಗುತ್ತದೆ. ಕಾಡುಮನುಷ್ಯರು ಆತನ ಕಾಲಿಗೆ ಬಿದ್ದು ಅವನನ್ನು ದೈವ ಸ್ವರೂಪಿ ಎಂದು ಭಾವಿಸಿ ಬಿಟ್ಟುಬಿಡುತ್ತಾರೆ.
ಆತ ಭಾಷಣ ಮುಗಿಸಿದಾಗ ಚಪ್ಪಾಳೆಯ ಸುರಿಮಳೆ ಆಗಿತ್ತು. ಆದರೆ ಆವತ್ತು ರಾತ್ರಿ ಮಾತಾಡುತ್ತಾ ಕೂತಾಗ ಊರಿನ ಹಿರಿಯರೊಬ್ಬರು ಚಿರಾಯುವಿನ ಹತ್ತಿರ ಕೇಳಿದ್ದರು. `ಮಾಹಿತಿ ದೊಡ್ಡದು ಅಂತೀರೋ ತಿಳುವಳಿಕೆಯೋ'
ಆಗ ಚಿರಾಯುವಿಗೆ ಜ್ಞಾನೋದಯವಾಗಿತ್ತು. ಯಾಮಿನಿ ಅನೇಕ ಸಲ ಹೇಳಿದ್ದರೂ ಅದರ ಸ್ವಾರಸ್ಯ ಹೊಳೆದಿರಲಿಲ್ಲ. ಒಳಗಿನಿಂದ ಹುಟ್ಟುವ ತಿಳುವಳಿಕೆ ಕಲೆಯನ್ನು ಸೃಷ್ಟಿಸುತ್ತದೆ. ಮಾಹಿತಿ ಕೇವಲ ಮಾಹಿತಿಯಾಗಷ್ಟೇ ಉಳಿಯುತ್ತದೆ. ತಿಳುವಳಿಕೆಗೆ ಅರಿವಿಗೆ ಕಾಲದ ಮಿತಿಯಿಲ್ಲ. ಆದರೆ, ಮಾಹಿತಿ ಕಾಲಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ.
ತನ್ನ ಮೊದಲ ಕಾದಂಬರಿ ತನ್ನ ಅಬೋಧ ಮುಗ್ಧತೆಯಲ್ಲಿ ಹುಟ್ಟಿದ್ದು. ಆ ನಂತರದ ಕಾದಂಬರಿಗಳೆಲ್ಲ ಮಾಹಿತಿಯಿಂದ ತುಂಬಿಕೊಂಡಿದ್ದವು ಅನ್ನುವುದು ಅವನಿಗೆ ಇದ್ದಕ್ಕಿದ್ದಂತೆ ನೆನಪಾಯಿತು. ತನ್ನನ್ನು ಮೆಚ್ಚುವ ವಿದೇಶೀ ಓದುಗರಿಗೆ ಬೇಕಾಗಿರುವುದು ತನ್ನ ದೇಶದ, ಭಾಷೆಯ, ಜನಾಂಗದ ಕುರಿತ ಮಾಹಿತಿಯಷ್ಟೇ ಅಲ್ಲವೇ. ಅವರಿಗೆ ಅದು ಹೊಸ ಅರಿವನ್ನು ಕೊಡಬೇಕಾಗಿಲ್ಲವಲ್ಲ. ಅರಿವಿನಿಂದ ಸೃಷ್ಟಿಸುವುದು ಈ ಕ್ಷಣದಲ್ಲಿ ತನ್ನಿಂದ ಸಾಧ್ಯವಾ.
ಯಾಮಿನಿಯ ಜೊತೆ ಚರ್ಚಿಸದೇ ತಾನೇನನ್ನೂ ಬರೆಯುವುದೇ ಸಾಧ್ಯವಿಲ್ಲ ಅಂತನ್ನಿಸಿ ಚಿರಾಯು ಕುರ್ಚಿಯಿಂದ ಎದ್ದು ನೆಲದ ಮೇಲೆ ಕೂತ. ತಾನು ಕೂತಲ್ಲಿಂದಲೇ ಕಾಣಿಸುತ್ತಿದ್ದ ಹಲಸಿನ ಮರವನ್ನು ನೋಡಿದ. ಮರ ಸೊಂಟದ ತುಂಬ ಪುಟ್ಟ ಪುಟ್ಟ ಹಲಸಿನ ಕಾಯಿಗಳನ್ನು ಹೊತ್ತುಕೊಂಡು, ಸೊಂಟಕ್ಕೆ ಗೆಜ್ಜೆಯ ಉಡಿದಾರ ಕಟ್ಟಿಕೊಂಡ ಮಗುವಿನ ಹಾಗೆ ಕಂಡಿತು.
ತನ್ನ ಇದುವರೆಗಿನ ಕಲಿಕೆಯನ್ನೆಲ್ಲ ಮರೆತು ಮತ್ತೆ ಅಜ್ಞಾನಿಯಾಗಬೇಕು. ಮತ್ತೆ ಹೊಸದಾಗಿ ಬರೆಯಬೇಕು ಅನ್ನಿಸಿತು. ಅಂಥ ಅನ್ನಿಸಿಕೆಯೂ ತನ್ನ ಕಲಿಕೆಯಿಂದಲೇ ಹುಟ್ಟಿದ್ದಲ್ಲವೇ ಅನ್ನಿಸಿ ಹೇಸಿಕೆ ಎನ್ನಿಸಿತು.
ತಾನು ಸದ್ಯ ಕೂತಿದ್ದ ಊರನ್ನು ಗವ್ವನೆ ಕವಿದ ಮೋಡಖಚಿತ ಆಕಾಶದ ಹಾಗೆ, ತನ್ನನ್ನೂ ಅನುಭವ, ಜಾಣ್ಮೆ, ಬುದ್ಧಿವಂತಿಕೆ, ಅಹಂಕಾರ ಮತ್ತು ಏನು ಬೇಕಾದರೂ ಬರೆಯಬಲ್ಲೆ ಎಂಬ ಹಮ್ಮು ಕವಿದುಕೊಂಡಿದೆ ಅನ್ನಿಸಿತು. ಬೆಂಗಳೂರಲ್ಲಿ ಕೂತು ಬರೆಯಲಾರೆ, ಇಲ್ಲಿಗೆ ಬಂದು ಬರೆಯುತ್ತೇನೆ ಅನ್ನಿಸಿದ್ದು ಕೂಡ ಹುಂಬತನ ಅನ್ನಿಸಿತು.
ಇಲ್ಲ, ನಾನೇನೂ ಬರೆಯುವುದಿಲ್ಲ, ಬರೆದರೂ ಅದನ್ನು ಬರೆಯುವ ಮುಂಚೆಯೇ ಜಗಜ್ಜಾಹೀರುಗೊಳಿಸುವುದಿಲ್ಲ. ಬರೆಯುವುದಕ್ಕೆ ಮುಂಚೆಯೇ ಅದನ್ನು ಮಾರಾಟ ಮಾಡುವ ವ್ಯಾಪಾರಿ ಆಗುವುದಿಲ್ಲ..
ಹಾಗನ್ನಿಸಿದ್ದೇ ತಡ, ತನಗೆ ಕಾದಂಬರಿ ಬರೆಯುವುದಕ್ಕೆ ಪ್ರಕಾಶನ ಸಂಸ್ಥೆ ಕೊಟ್ಟಿದ್ದ ಹಣವನ್ನು ತಕ್ಷಣವೇ ಮರಳಿಸಬೇಕು ಅನ್ನಿಸಿತು. ಅವರಿಗೆ ಫೋನ್ ಮಾಡಲೆಂದು ಫೋನ್ ಕೈಗೆತ್ತಿಕೊಂಡ.
ತಾನು ನೆಟ್ ವರ್ಕ್ ಸಿಗದ ಜಾಗದಲ್ಲಿದ್ದೇನೆ ಅನ್ನುವುದು ಆಗ ನೆನಪಾಯಿತು.