Friday, May 23, 2008

ಅವಳು ಹಾಗಿರಲಿಲ್ಲ

ಚಿರಾಯುವಿಗೆ ನೆನಪಿಸಿಕೊಳ್ಳುತ್ತಾ ಹೋದಂತೆಲ್ಲ ರೇಜಿಗೆಯಾಯಿತು.
ಅವಳು ಹಾಗಿರಲಿಲ್ಲ ಅನ್ನುವುದು ಅವನಿಗೆ ಬರೆಯುತ್ತಾ ಹೋದಾಗಲೇ ಗೊತ್ತಾಗಿತ್ತು. ಆದರೆ, ನಿಜದಲ್ಲಿ ಕಂಡ ಪಾತ್ರಗಳು ಲೇಖಕನ ಭಾವಲೋಕದಲ್ಲಿ ಮತ್ತೊಂದಷ್ಟು ಆಯಾಮಗಳೊಂದಿಗೆ ಪಡಿಮೂಡುವುದು ಸಹಜ ಎಂದು ಚಿರಾಯು ನಂಬಿದ್ದ. ಕಂಡದ್ದನ್ನು ಕಂಡ ಹಾಗೇ ಯಾಕೆ ಬರೆಯಬೇಕು. ಕಂಡದ್ದನ್ನು ಕಂಡ ಹಾಗೆ ಬರೆಯುವುದಕ್ಕೆ ತನಗೆ ಸಾಧ್ಯೇ ಇಲ್ಲ ಅನ್ನುವುದು ಕಾಲೇಜು ದಿನಗಳಲ್ಲೇ ಅವನಿಗೆ ಗೊತ್ತಾಗಿಹೋಗಿತ್ತು. ಅದು ನಿನ್ನ ಶಕ್ತಿ ಅಂತ ಇಂಗ್ಲಿಷ್ ಮೇಷ್ಟ್ರು ಹೊಗಳಿದ್ದರು.
ಆದರೆ ಲೇಖಕನ ಭಾವಲೋಕದ ವಿಸ್ತಾರ ಎಷ್ಟು ಅನ್ನುವ ಪ್ರಶ್ನೆ ಅವನನ್ನು ಮತ್ತೆ ಮತ್ತೆ ಕಾಡತೊಡಗಿದ್ದು ಇತ್ತೀಚೆಗೆ. ಶಿವರಾಮ ಕಾರಂತರ ಅಷ್ಟೂ ಕಾದಂಬರಿಗಳನ್ನು ತರಿಸಿಕೊಂಡು ಚಿರಾಯು ಅಷ್ಟನ್ನೂ ಓದಿದ. ಅವರ ಕಾದಂಬರಿಗಳಲ್ಲಿ ಬರುವ ಪಾತ್ರಗಳಲ್ಲಿ ಅಂಥ ವಿಶೇಷವೇನೂ ಕಾಣಿಸಲಿಲ್ಲ. ಆರಂಭದಿಂದಲೂ ಅವನಿಗೆ ಶಿವರಾಮ ಕಾರಂತರ ಕಾದಂಬರಿಗಳೆಂದರೆ ಅಷ್ಟಕ್ಕಷ್ಟೇ. ಅವರು ಕಂಡಿದ್ದನ್ನು ಕಂಡ ಹಾಗೆ ಬರೆಯುತ್ತಾ ಹೋಗುತ್ತಾರೆ. ಅವರ ಛಾಪು ಆ ಕಾದಂಬರಿಗಳಲ್ಲಿ ಕಾಣಿಸುವುದಿಲ್ಲ ಎಂದು ಚಿರಾಯು ವಾದಿಸುತ್ತಿದ್ದ. ಹಾಗಾದಾಗ, ಕಾದಂಬರಿ ಡಾಕ್ಯುಮೆಂಟರಿ ಆಗುತ್ತದೆ ಎಂದಿದ್ದ. ಆ ಮಾತಿಗೆ ಪ್ರಬಲ ವಿರೋಧಗಳು ವ್ಯಕ್ತವಾಗಿದ್ದವು. ಆದರೆ, ಮತ್ತೆ ಮತ್ತೆ ಓದಿದಾಗಲೂ ಕಾರಂತರ ಕಾದಂಬರಿಗಳಲ್ಲಿ ಮೆಚ್ಚಿಕೊಳ್ಳಬಹುದಾದ ಅಂಶಗಳು ಅವನಿಗೆ ಕಾಣಿಸಿರಲೇ ಇಲ್ಲ. ಕುವೆಂಪು ಕಾದಂಬರಿಗಳಲ್ಲಿ ಕಾಣಿಸುವ ಬೆರಗು, ಅನಂತಮೂರ್ತಿಯವರಲ್ಲಿ ಕಾಣಿಸುವ ಒಳನೋಟ, ಲಂಕೇಶರ ಕಾದಂಬರಿಗಳಲ್ಲಿ ಕಾಣುವ ಹೊಳಹುಗಳು ಕಾರಂತರಲ್ಲಿ ಅವನಿಗೆ ಕಾಣಿಸಲೇ ಇಲ್ಲ.
ಆದರೆ, ಅವಳು ಬಂದು ನಾನು ಹಾಗಿದ್ದೆನಾ ಎಂದು ಕೇಳಿಹೋದ ಮೇಲೆ ಚಿರಾಯು ನಿಜಕ್ಕೂ ಗೊಂದಲಕ್ಕೆ ಬಿದ್ದ. ಅವಳನ್ನು ಹೇಗಿದ್ದಳೋ ಹಾಗೆ ಚಿತ್ರಿಸಿದರೆ ತಾನು ವಂಚಕನಂತೆ ಕಾಣಿಸುತ್ತಿದ್ದೆನಾ, ಕಾಮಿಯಂತೆ ಗೋಚರಿಸುತ್ತಿದ್ದೆನಾ, ತನಗಿಂತ ವಯಸ್ಸಾದ ಅಸಹಾಯಕ ಹೆಣ್ಣನ್ನು ಬಳಸಿಕೊಂಡವನಂತೆ ಕಾಣುತ್ತಿದ್ದೆನಾ ಅನ್ನುವ ಪ್ರಶ್ನೆಗಳಿಗೆ ಅವನಲ್ಲೇ ಉತ್ತರ ಇರಲಿಲ್ಲ. ಕಿಣಿಗೂ ತನಗೂ ವ್ಯತ್ಯಾಸವೇ ಇರುತ್ತಿರಲಿಲ್ಲ. ಕಿಣಿ ಸುಮ್ಮನೆ ಅವಳೊಂದಿಗೆ ಬದುಕುತ್ತಾ ಹೋದರು. ಅವಳಿಗೊಂದು ಕೆಲಸ ಕೊಟ್ಟಿದ್ದರು. ಕೈ ತುಂಬ ಸಂಬಳ ಕೊಡುತ್ತಿದ್ದರು. ತಾನು ಅವಳಿಗೇನೂ ಕೊಟ್ಟಿರಲಿಲ್ಲ. ಅವಳು ಏನನ್ನೂ ನಿರೀಕ್ಷಿಸಿರಲೂ ಇಲ್ಲ. ಆದರೆ ತಾನು ತುಂಬ ಪ್ರೀತಿಸಬೇಕು ಅಂದುಕೊಂಡಿದ್ದಳಲ್ಲ ಅವಳು. ಆ ಪ್ರೀತಿಯನ್ನೂ ತಾನು ಕೊಟ್ಟಿರಲಿಲ್ಲ. ಅವಳನ್ನು ಒಂದೇ ಒಂದು ಗಳಿಗೆ ಪ್ರೀತಿಸುವುದಕ್ಕೂ ತನ್ನಿಂದ ಸಾಧ್ಯವಾಗಿರಲಿಲ್ಲ. ಆ ಹೊತ್ತಲ್ಲಿ, ಅವಳ ಜೊತೆಗಿರಬೇಕು ಅನ್ನಿಸುತ್ತಿತ್ತು. ಅಲ್ಲಿ ಮಾತಿಗೆ ಜಾಗವಿರಲಿಲ್ಲ. ಎತ್ತಲೋ ನೋಡುತ್ತಾ, ಅನ್ಯಮನಸ್ಕ ಸ್ಥಿತಿಯಲ್ಲಿ ಬೆರಳುಗಳು ಮಾತಾಡುತ್ತಿದ್ದವು. ಆ ಸ್ಪರ್ಶದಲ್ಲಿ ಪ್ರೀತಿಯ ಬಣ್ಣ ಇರಲಿಲ್ಲ. ಅವಳೇನಾದರೂ ನನ್ನನ್ನು ಮದುವೆ ಆಗುತ್ತೀಯಾ ಎಂದು ಕೇಳಿ ಮುಜುಗರಕ್ಕೆ ಸಿಕ್ಕಿಸಿದ್ದರೆ ತಾನೇನು ಮಾಡುತ್ತಿದ್ದೆ. ಆದರೆ ಅಂಥ ಮುಜುಗರದ ಪ್ರಶ್ನೆಗಳನ್ನು ಅವಳು ಕೇಳಲೇ ಇಲ್ಲ. ತನ್ನನ್ನು ಒಬ್ಬ ಪರಿಣಿತ ವೈದ್ಯನಿಗೆ ಒಪ್ಪಿಸಿಕೊಂಡ ರೋಗಿಯ ಹಾಗೆ ಅವಳು ತನ್ನ ದೇಹವನ್ನು ಚಿರಾಯುವಿನ ಕೈಗಿತ್ತು ಸುಮ್ಮನಾಗುತ್ತಿದ್ದಳು.
ಅವಳ ಲಾಲಸೆಗಳು ತೀರುತ್ತಿದ್ದುವಲ್ಲ ಅಂತಲೂ ಅನೇಕ ಸಲ ಅನ್ನಿಸುತ್ತಿತ್ತು ಚಿರಾಯುವಿಗೆ. ಆದರೆ ಆಕೆಯದು ಲೋಲುಪತೆ ಅಷ್ಟೇ ಆಗಿರಲಿಲ್ಲ ಅನ್ನುವುದೂ ಅವನಿಗೆ ಗೊತ್ತಿತ್ತು. ಇಲ್ಲದೇ ಹೋಗಿದ್ದರೆ ಅವಳು ಆವತ್ತು ತನ್ನನ್ನು ಕಾಪಾಡಬೇಕಾಗಿರಲಿಲ್ಲ. ಅಷ್ಟಕ್ಕೂ ಅವಳು ಕಾಪಾಡಿದ್ದು ತನ್ನನ್ನಾ ಅಥವಾ ಅವಳನ್ನೇ ಅವಳು ಕಾಪಾಡಿಕೊಂಡಿದ್ದಳಾ.
ಸಂಬಂಧಗಳನ್ನು ಚಿರಾಯು ಹೀಗೆ ವಿಶ್ಲೇಷಿಸುತ್ತಾ ಕಂಗಾಲಾಗುತ್ತಾನೆ. ಹಾಗೆ ವಿಶ್ಲೇಷಿಸಿದಾಗೆಲ್ಲ ಅದು ಕಾಮಕೇಂದ್ರಿತ ದೃಷ್ಟಿಕೋನ ಎಂದು ವಿಮರ್ಶಕರು ಟೀಕಿಸಿದ್ದಾರೆ. ಹೆಣ್ಣಿನ ಅಂತರಂಗದ ತೊಳಲಾಟ, ಹೋರಾಟ ಮತ್ತು ತಲ್ಲಣಗಳನ್ನು ಧಿಕ್ಕರಿಸಿದ ಬರಹ ಎಂದು ವಿಮರ್ಶಕಿಯರು ಬರೆದು ಚಿರಾಯುವನ್ನು ಅನೇಕ ಸೆಮಿನಾರುಗಳಲ್ಲಿ ಟೀಕಿಸಿದ್ದಾರೆ.
ಅಂಥ ಟೀಕೆಯೂ ತನಗೆ ನೆರವಾಗಿದೆಯಲ್ಲ ಅಂದುಕೊಂಡ ಚಿರಾಯು. ಅದರಿಂದಲೇ ತನಗೆ ಓದುಗರು ಹುಟ್ಟಿಕೊಂಡದ್ದು. ತನ್ನ ಕಾದಂಬರಿಗಳಲ್ಲಿ ಬರುವ ರೋಚಕ ವಿವರಗಳಿಂದಲೇ ತನಗೊಂದು ಪ್ರಭಾವಳಿ ಬಂದದ್ದು. ಅಂಥ ಪ್ರಭಾವಳಿಯಿಂದ ಹೊರಗೆ ಬರುವುದು ಸಾಧ್ಯವಾ. ಹೊರಗೆ ಬರಬೇಕಾ. ಮತ್ತೂ ಅದನ್ನೇ ಅದನ್ನೇ ಬರೆಯುತ್ತಾ ಜಡ್ಡಾಗುತ್ತಿದ್ದೇನಾ.