Monday, April 28, 2008

14.ಹೇಗಿದ್ದರೇನಂತೆ, ನಿನ್ನನೊಲಿಯದೆ ಮಾಣೆ..

ಬರೆಯುವುದಕ್ಕೆ ಕುಳಿತಾಗ ತಾನು ಕಂಡಿರುವ ಅಷ್ಟೂ ಪಾತ್ರಗಳು ಒಂದರ ಹಿಂದೊಂದರಂತೆ ಅಟ್ಟಿಸಿಕೊಂಡು ಬರುವುದು ಚಿರಾಯು ಆರಂಭದಿಂದ ಎದುರಿಸಿಕೊಂಡು ಬಂದಿರುವ ಸಮಸ್ಯೆಗಳಲ್ಲಿ ಒಂದು. ಅವರ ಪೈಕಿ ಯಾರೊಬ್ಬರ ಬಗ್ಗೆ ಬರೆದರೂ ಸಾಕು ಎಂದು ಅವನಿಗೆ ಅನೇಕ ಸಲ ಅನ್ನಿಸಿದೆ. ಆದರೆ ಒಂದು ನೆನಪಿನ ಜೊತೆ ಇನ್ನೊಂದು ಕತೆ ತಳಕು ಹಾಕಿಕೊಂಡಿರುತ್ತಿತ್ತು. ತನ್ನನ್ನು ನಲವತ್ತನೆಯ ವಯಸ್ಸಿನಲ್ಲಿ ಆಕರ್ಷಿಸಿದ ಯಾಮಿನಿಯ ಜೊತೆಗೇ, ತಾನು ಐದನೇ ತರಗತಿಯಲ್ಲಿ ಓದುತ್ತಿದ್ದಾಗ ಹತ್ತಿರವಾದ ಜಾಯ್ಸ್ ನೆನಪಾಗುತ್ತಿದ್ದಳು. ಜಾಯ್ಸ್‌ಳ ಮತ್ತೊಂದು ರೂಪ ಯಾಮಿನಿ ಅನ್ನಿಸುತ್ತಿತ್ತು. ಅವಳೀಗ ತನ್ನ ಜೊತೆಗಿದ್ದಿದ್ದರೇ ಯಾಮಿನಿಯಷ್ಟೇ ಆಪ್ತಳಾಗುತ್ತಿದ್ದಳೋ ಏನೋ?
ಬಾಲ್ಯದಲ್ಲಿ ಕಂಡ, ಮೆಚ್ಚಿಕೊಂಡ, ಆತುಕೊಂಡ ವ್ಯಕ್ತಿಗಳನ್ನೇ ನಾವು ಜೀವನದ ಉದ್ದಕ್ಕೂ ಹುಡುಕುತ್ತಿರುತ್ತೇವೆ ಅನ್ನುತ್ತಾನೆ ಚಿರಾಯುವಿನ ಅವ್ಯಕ್ತ ಕಾದಂಬರಿಯಲ್ಲಿ ಬರುವ ಸದಾಶಿವ. ಬಾಲ್ಯದಲ್ಲಿ ಕಂಡವರು ಮತ್ತೆ ಮತ್ತೆ ಬೇರೆ ಬೇರೆ ರೂಪಗಳಲ್ಲಿ ಎದುರಾಗುತ್ತಾರೋ ಅಥವಾ ಅವರನ್ನೇ ತಾನು ಹುಡುಕಿಕೊಂಡು ಅಲೆಯುತ್ತಿದ್ದೇನಾ ಎಂದೂ ಚಿರಾಯು ಅನೇಕ ಸಲ ಯೋಚಿಸಿದ್ದಾನೆ. ಚಿಕ್ಕಂದಿನಲ್ಲಿ ಪೆಪ್ಪರಮಿಂಟು ತಂದುಕೊಟ್ಟ ಚಿಕ್ಕಮ್ಮ, ಮಳೆಯಲ್ಲಿ ನೆನೆಯುತ್ತಾ ನಿಂತಿದ್ದಾಗ ಮನೆಯೊಳಗೆ ಕರೆದುಕೊಂಡು ಹೋಗಿ ತಲೆಯೊರೆಸಿ ಕೋಡುಬಳೆ ಕೊಟ್ಟ ಭಾಗ್ಯಲಕ್ಷ್ಮಿ, ರಾತ್ರಿ ಯಕ್ಷಗಾನ ಬಯಲಾಟಕ್ಕೆ ಎತ್ತಿನ ಗಾಡಿಯಲ್ಲಿ ಕರೆದುಕೊಂಡು ಹೋಗುತ್ತಿದ್ದ ಬಾಬಣ್ಣ, ನಿನ್ನನ್ನು ಹುಗಿದು ಬಿಡುತ್ತೇನೆ ಎಂದು ಅಬ್ಬರಿಸಿದ ವಿಕ್ಟರ್‌ನ ಅಪ್ಪ ಜರ್ಮಿ- ಇವರನ್ನೆಲ್ಲ ಚಿರಾಯು ಮತ್ತೆ ಮತ್ತೆ ಬೇರೆ ಬೇರೆ ರೂಪದಲ್ಲಿ ಭೇಟಿಯಾಗುತ್ತಾ ಬಂದಿದ್ದಾನೆ. ತನ್ನ ಕಾರೋಡಿಸುವ ಶೇಷು ಥೇಟ್ ಗಾಡಿ ಬಾಬಣ್ಣ ಅನ್ನಿಸುತ್ತಾನೆ. ಜ್ವರ ಬಂದು ಮಲಗಿದಾಗ ಆರೈಕೆ ಮಾಡಿದ ಅನ್ನಪೂರ್ಣೆಯಲ್ಲಿ ಭಾಗ್ಯಲಕ್ಷ್ಮಿಯೇ ಕಾಣಿಸಿದ್ದಳು. ಜ್ವರದ ಅಮಲಲ್ಲಿ ತಾನು ಅನ್ನಪೂರ್ಣೆಯನ್ನೂ ಭಾಗ್ಯಲಕ್ಷ್ಮಿ ಎಂದು ಕರೆದಿದ್ದೆ ಎಂದು ಅನ್ನಪೂರ್ಣೆ ಹೇಳಿದ್ದು ನೆನಪಾಗುತ್ತದೆ. ಯಾರೋ ಅದು ಭಾಗ್ಯಲಕ್ಷ್ಮಿ. ನಾನು ಕೇಳೇ ಇಲ್ಲವಲ್ಲೋ’ ಅಂದಿದ್ದಳು ಅನ್ನಪೂರ್ಣೆ. ಭಾಗ್ಯಲಕ್ಷ್ಮಿ ಯಾರೆನ್ನುವುದು ಚಿರಾಯುವಿಗೂ ಥಟ್ಟನೆ ಹೊಳೆದಿರಲಿಲ್ಲ. ಹೊಳೆದಾಗ ಆಕೆ ಸುಮಾರು ಮೂವತ್ತು ವರುಷಗಳ ಕಾಲ ತನ್ನೊಳಗೇ ಅವಿತು ಕುಳಿತಿದ್ದಳಲ್ಲ ಅಂತ ಅಚ್ಚರಿಯಾಗಿತ್ತು ಅವನಿಗೆ.
ತನ್ನ ಕಾದಂಬರಿಗಳಲ್ಲಿ ಸಣ್ಣ ಕತೆಯಲ್ಲಿ, ತಮಾಷೆಗೆಂದು ಪ್ರಯೋಗಕ್ಕೆಂದು ಬರೆದ ನಾಟಕದಲ್ಲಿ, ಆಗೀಗ ಬರೆದ ಕವಿತೆಗಳಲ್ಲಿ ಕಾಣಿಸಿಕೊಳ್ಳುವವರು ತಾನು ಎದುರಾದವರೇ ಅನ್ನುವುದು ಚಿರಾಯುವಿಗೆ ಸ್ಪಷ್ಟವಾದದ್ದು ಮಹಾಪ್ರಸ್ಥಾನ’ ಬರೆಯುವ ಹೊತ್ತಿಗೆ. ಆದರೆ ಅವರೆಲ್ಲ ಯಥಾವತ್ತಾಗಿ ತನ್ನ ಕಾದಂಬರಿಯೊಳಗೆ ಪ್ರವೇಶ ಪಡೆದಿಲ್ಲ ಎನ್ನುವುದು ಚಿರಾಯುವಿಗೆ ಗೊತ್ತಿತ್ತು. ಅವರನ್ನು ತನ್ನ ಉದ್ದೇಶಗಳಿಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿದ್ದೇನೆ ಎನ್ನಿಸತೊಡಗಿತ್ತು. ಅದು ಸ್ಪಷ್ಟವಾದದ್ದು ನಿರ್ಮಲ ಬಂದು ರಾದ್ಧಾಂತ ಮಾಡಿದಾಗಲೇ.
ನಿರ್ಮಲನಿಗೂ ಚಿರಾಯುವಿಗೂ ಎಂಟು ವರುಷ ವ್ಯತ್ಯಾಸ. ನಿರ್ಮಲೆ ಅವನಿಗಿಂತ ದೊಡ್ಡವಳು. ಚಿರಾಯು ಕಾಲೇಜು ಮುಗಿಸಿ ಕೆಲಸ ಹುಡುಕುತ್ತಿದ್ದ. ಆರಂಭದ ದಿನದಲ್ಲಿ ಸಿಕ್ಕಿದ್ದು ಗುಮಾಸ್ತನ ಕೆಲಸ. ಆ ಸಂಸ್ಥೆಯಲ್ಲೇ ತುಂಬ ವರುಷಗಳಿಂದ ಕೆಲಸಕ್ಕಿದ್ದವಳು ನಿರ್ಮಲೆ.
ಅಲ್ಲಿ ಕೆಲಸ ಮಾಡುತ್ತಿದ್ದ ದಿನಗಳಲ್ಲೇ ಅವಳು ಹತ್ತಿರವಾದದ್ದು. ಅವಳ ಕತೆ ಗೊತ್ತಾದದ್ದು. ಅವಳು ಬಡ ಕುಟುಂಬದ ಹುಡುಗಿ. ಗೋವಾದಿಂದ ಮಂಗಳೂರಿಗೆ ಬಂದಿದ್ದಳು. ಅವಳ ಸಂಬಳವನ್ನು ಸಂಸ್ಥೆಯ ಯಜಮಾನ ವಾಸುದೇವ ಕಿಣಿ ಪ್ರತಿತಿಂಗಳೂ ಅವಳ ಮನೆಗೆ ಕಳುಹಿಸಿಬಿಡುತ್ತಿದ್ದ. ಅವಳ ವಾಸಕ್ಕೊಂದು ಮನೆಯನ್ನೂ ಗೊತ್ತು ಮಾಡಿದ್ದ. ಆಗಲೇ ವಾಸುದೇವನಿಗೆ ಅರುವತ್ತೋ ಅರುವತ್ತೆರಡೋ.
ಕ್ರಮೇಣ ವಾಸುದೇವನಿಗೂ ನಿರ್ಮಲೆಗೂ ಇರುವ ಸಂಬಂಧದ ಸ್ವರೂಪ ಚಿರಾಯುವಿಗೂ ಅರ್ಥವಾಯಿತು. ಆಕೆಗೆ ಎಲ್ಲರೂ ಅಂಜುವುದೇಕೆ ಅನ್ನುವುದೂ ತಿಳಿಯಿತು. ಅದರ ಬಗ್ಗೆ ಕೀಳಾಗಿ ಮಾತಾಡುವವರೂ ಸಿಕ್ಕಿದರು. ಅವಳೆದುರು ಬಾಲಮುದುರಿಕೊಂಡಿದ್ದು ಅವಳು ಅತ್ತ ಹೋದೊಡನೆ ಟೀಕಿಸುತ್ತಿದ್ದವರ ನಡುವೆ ಅವಳ ಬಗ್ಗೆ ಒಂದು ಕುತೂಹಲ ಉಳಿಸಿಕೊಂಡೇ ಇದ್ದ ಚಿರಾಯು.
ಒಂದು ವಿಚಿತ್ರ ಸನ್ನಿವೇಶದಲ್ಲಿ ಚಿರಾಯು ಅವಳಿಗೆ ಹತ್ತಿರಾಗಿಬಿಟ್ಟ. ಒಂದು ಮಧ್ಯಾಹ್ನ ಚಿರಾಯುವಿಗೆ ಇದ್ದಕ್ಕಿದ್ದಂತೆ ಹೊಟ್ಟೆನೋವು ಶುರುವಾಯಿತು. ಮಧ್ಯಾಹ್ನ ಊಟದ ಹೊತ್ತಲ್ಲಿ ಯಾರೂ ಕಛೇರಿಯಲ್ಲಿ ಇರಕೂಡದು ಅನ್ನುವುದು ಆ ಆಫೀಸಿನ ನಿಯಮ. ಒಂದು ಗಂಟೆಯಿಂದ ಎರಡು ಗಂಟೆ ಆಫೀಸಿಗೆ ವಿರಾಮ. ಆವತ್ತು ನೋವಿನಿಂದ ಒಂದು ಹೆಜ್ಜೆಯನ್ನೂ ಇಡಲಾರದೆ ಆಫೀಸಿನಲ್ಲಿ ನರಳುತ್ತಾ ಬಿದ್ದಿದ್ದ ಚಿರಾಯುವಿನ ಬಳಿಗೆ ಬಂದಿದ್ದಳು ನಿರ್ಮಲೆ. ಹೊಟ್ಟೆನೋವಿನಿಂದ ನರಳುವವನನ್ನು ಸಂತೈಸುವ ಮಾತಾಡಿದ್ದಳು. ತಾನೇ ಡಾಕ್ಟರಿಗೆ ಫೋನ್ ಮಾಡಿ ಕರೆಸಿದ್ದಳು. ಚಿರಾಯುವಿಗೆ ಸರ್ಪಸುತ್ತು ಆಗಿತ್ತು. ಡಾಕ್ಟರ್ ಔಷಧಿ ಕೊಟ್ಟು ಒಂದು ತಿಂಗಳು ಹೊಟೆಲಿನ ಊಟ ತಿನ್ನಬಾರದು ಎಂದು ತಾಕೀತು ಮಾಡಿದ್ದರು.
ಆ ಒಂದು ತಿಂಗಳು ತನ್ನ ಮನೆಯಿಂದ ಊಟ ತಂದುಕೊಟ್ಟವಳು ನಿರ್ಮಲೆ. ಅವಳಿಗೆ ಚಿರಾಯು ಹತ್ತಿರವಾದದ್ದೂ ಆಗಲೇ. ಅವಳ ಮಡಿಲಲ್ಲಿ ಮಲಗಿಕೊಂಡು, ಅವಳ ಹೊಟ್ಟೆಗೆ ಮುಖ ಒತ್ತಿಕೊಂಡು, ಅವಳ ಎದೆಗೊರಗಿಕೊಂಡು ಚಿರಾಯು ಆರಂಭದಲ್ಲಿ ಸುಮ್ಮನೆ ತುಂಬಾ ಹೊತ್ತು ಕೂತಿರುತ್ತಿದ್ದ. ಕ್ರಮೇಣ ಸ್ಪರ್ಶಕ್ಕೆ ಹೊಸ ಅರ್ಥ ಸಿಕ್ಕಿತು. ಹುಡುಕಾಟ ಶುರುವಾಯಿತು. ಸರ್ಪಸುತ್ತಿನ ಹಾಗೆ ಅವಳೂ ಚಿರಾಯುವನ್ನು ಮೈತುಂಬ ಮೂಡಿದಳು.
ಅಂಥ ಒಂದು ಸುಡು ಮಧ್ಯಾಹ್ನವೇ ಚಿರಾಯು ಸಿಕ್ಕಿಬೀಳುವ ಸ್ಥಿತಿ ತಲುಪಿದ್ದು. ಚಿರಾಯು ಮತ್ತು ನಿರ್ಮಲೆ ಆಫೀಸಿನ ಬಾಗಿಲು ಹಾಕಿಕೊಂಡು ಮೈಮರೆತಿರುವ ಹೊತ್ತಲ್ಲೇ ವಾಸುದೇವ ಕಿಣಿ ಬಂದುಬಿಟ್ಟಿದ್ದರು. ಅವರು ಸಾಮಾನ್ಯವಾಗಿ ಹಿಂಬಾಗಿಲಿನಿಂದ ಬಂದು ತಮ್ಮ ಪೀಠದಲ್ಲಿ ಆಸೀನರಾಗಿ ಒಂದೆರಡು ಗೇರುಬೀಜ ತಿಂದು, ಬಾದಾಮಿ ಹಾಲು ಕುಡಿದ ನಂತರ ಆಫೀಸು ತೆರೆದುಕೊಳ್ಳುತ್ತಿತ್ತು. ಆವತ್ತು ಅವರು ಹೊತ್ತಿಗೆ ಮುಂಚೆಯೇ ಬಂದು ಆಫೀಸಿನ ಹಿಂಬಾಗಿಲು ಬಡಿಯುವ ಹೊತ್ತಿಗೆ ಗಾಬರಿ ಬಿದ್ದದ್ದು ಚಿರಾಯು. ಹಾಗೆ ನೋಡಿದ್ದರೆ ಭಯಬೀಳಬೇಕಾಗಿದ್ದವಳು ನಿರ್ಮಲೆ. ಅವಳಿಗೆ ಆ ಉದ್ಯೋಗ ಅನಿವಾರ್ಯವಾಗಿತ್ತು. ಅವರ ಕೈಗೆ ಸಿಕ್ಕಿಬಿದ್ದಿದ್ದರೆ ಉದ್ಯೋಗ ಕಳಕೊಳ್ಳುವ ಭೀತಿಯಿತ್ತು.
ಆದರೆ ಚಿರಾಯು ಮಾತ್ರ ಥರ ಥರ ನಡುಗಿದ್ದ. ಅವಳು ಏನೂ ಆಗದವಳ ಹಾಗೆ, ರವಕೆಯ ಗುಂಡಿ ಹಾಕಿಕೊಂಡು ತಲೆಬಾಚಿಕೊಂಡು ಹೋಗಿ ಬಾಗಿಲು ತೆರೆಯಲು ಹೋದಳು. ಅವಳನ್ನು ಬಿಗಿಯಾಗಿ ಹಿಡಿದುಕೊಂಡು ಬೇಡ ಅಂತ ತಲೆಯಾಡಿಸಿದ್ದ ಚಿರಾಯು. ಅವಳು ಥಟ್ಟನೆ ಪಕ್ಕದ್ದ ಬ್ಲೇಡು ಕೈಗೆತ್ತಿಕೊಂಡು ಚಿರಾಯುವಿನ ಮುಂಗೈ ಸೀಳಿದ್ದಳು. ಅದಕ್ಕೆ ತನ್ನ ಕರ್ಚೀಫು ಸುತ್ತಿ ಹೋಗಿ ಬಾಗಿಲು ತೆರೆದಿದ್ದಳು.
ವಾಸುದೇವ ಕಿಣಿಯವರು ಬರುವ ಹೊತ್ತಿಗೆ ಚಿರಾಯು ನೋಯುತ್ತಿರುವ ಕೈಯನ್ನು ಒತ್ತಿ ಹಿಡಿದುಕೊಂಡು ಕೂತಿದ್ದ. ರಕ್ತ ಇನ್ನೂ ಸುರಿಯುತ್ತಲೇ ಇತ್ತು. ಕಿಣಿಯವರು ಅವನನ್ನು ಅಕ್ಕರೆಯಿಂದ ಮಾತಾಡಿಸಿ, ನಿರ್ಮಲೆಯ ಜೊತೆಗೇ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.
ಚಿರಾಯು ಆ ಗಾಯದ ಗುರುತು ಶಾಶ್ವತವಾಗಿರುವ ಮುಂಗೈ ನೋಡಿಕೊಂಡ. ನಿರ್ಮಲೆ ತನ್ನ ಕಾದಂಬರಿಯಲ್ಲಿ ವಾಸುದೇವ ಕಿಣಿಯನ್ನು ತನ್ನ ಯೌವನದ ಬಲೆಯೊಳಗೆ ಬಂಧಿಸಿರುವ ಹೆಣ್ಣಾಗಿ ಚಿತ್ರಿತವಾಗಿದ್ದಳು. ಅವಳು ಅದೆಲ್ಲಿ ಓದಿದಳೋ, ಅದು ಹೇಗೆ ತನ್ನನ್ನು ಹುಡುಕಿದಳೋ, ನೇರವಾಗಿ ಚಿರಾಯುವಿನ ಮನೆಗೆ ಬಂದು ನಾನು ಹಾಗಿದ್ದೆನಾ?’ ಎಂದು ನೇರವಾಗಿ ಕೇಳಿದ್ದಳು. ಹಾಗೆ ಕೇಳಿಸಿಕೊಳ್ಳುವ ಹೊತ್ತಿಗೆ ಮನೆಯಲ್ಲಿ ಸ್ಮಿತಾಳೂ ಇದ್ದಳು.