Saturday, April 26, 2008

12. ಮತ್ತೆ ಮಳೆ ಹೊಯ್ಯುತಿದೆ

ಸುಳ್ಳದ ಮನೆಯೊಳಗೆ ಕಾಲಿಡುತ್ತಿದ್ದಂತೆ ಆವತ್ತು ರಾತ್ರಿ ಒಂದೋ ಕಾರಲ್ಲಿ ಮಲಗಬೇಕು ಇಲ್ಲದೇ ಹೋದರೆ ಸುಬ್ಬಣ್ಣನ ಮನೆಗೆ ಹೋಗಬೇಕು ಅನ್ನುವುದು ಚಿರಾಯುವಿಗೆ ಖಚಿತವಾಯ್ತು. ಮತ್ತೆ ಸುಳ್ಯ ಪೇಟೆಗೆ ಹೋಗಿ ಅಲ್ಲೊಂದು ಹೊಟೆಲು ಹುಡುಕಿ ಅಲ್ಲಿ ರೂಮು ಮಾಡುವ ಉತ್ಸಾಹ ಇರಲಿಲ್ಲ. ಅಲ್ಲಿ ರೂಮು ಮಾಡಿದರೂ ನೆಮ್ಮದಿಯಾಗಿರುತ್ತೇನೆ ಅನ್ನುವ ನಂಬಿಕೆಯೂ ಇರಲಿಲ್ಲ. ಚಿರಾಯು ಬಂದ ಸುದ್ದಿ ಹಬ್ಬದೇ ಇರುವುದೂ ಇಲ್ಲ. ಗೆಳೆಯರು ಹುಡುಕಿಕೊಂಡು ಬರುತ್ತಾರೆ. ಮತ್ತೆ ರಾತ್ರಿ ಸಮಾರಾಧನೆ ನಡೆಯುತ್ತದೆ. ಮತ್ತೆ ಬಾಲ್ಯದ ದಿನಗಳಿಗೆ ಮರಳುತ್ತೇವೆ. ಪಯಸ್ವಿನಿ ನದಿ ಹಿಮ್ಮುಖವಾಗಿ ಹರಿಯತೊಡಗುತ್ತದೆ.
ಚಿರಾಯುವಿಗೆ ಅದು ಬೇಕಿರಲಿಲ್ಲ. ಹಾಗಂತ ಸುಬ್ಬಣ್ಣನ ಮನೆಗೆ ಹೋಗುವುದೂ ಕೂಡ ಅಷ್ಟು ಒಳ್ಳೆಯ ನಿರ್ಧಾರದಂತೆ ಕಾಣಲಿಲ್ಲ. ಸುಬ್ಬಣ್ಣನ ಹೇಳಿ ಕೇಳಿ ಕವಿ, ಅದಕ್ಕಿಂತ ಹೆಚ್ಚಾಗಿ ಏಕಾಕಿ. ತನ್ನ ಏಕಾಂತವನ್ನು ಭಂಗಪಡಿಸುವ ಕ್ಷಣಗಳಿಗೆ ಕಾಯುತ್ತಾ, ಮಾತಿಗೆ ಹಾತೊರೆಯುತ್ತಿರುವ ಕವಿಗಿಂತ ಅಪಾಯಕಾರಿ ಜೀವಿಗಳಿಲ್ಲ ಅನ್ನುವುದನ್ನು ಚಿರಾಯು ತನ್ನ ಅಷ್ಟೂ ವರ್ಷಗಳ ಅನುಭವದಿಂದ ಕಂಡುಕೊಂಡಿದ್ದ.
ಆ ಅನುಭವ ಅವನಿಗೆ ಮೊದಲು ಆದದ್ದು ಕವಿಗಳ ಹತ್ತಿರ. ನಂತರ ನಟನೊಬ್ಬನ ಹತ್ತಿರ. ತನ್ನ ಯೌವನದ ದಿನಗಳಲ್ಲಿ ಯಾರನ್ನೂ ಹತ್ತಿರ ಸೇರಿಸದ ಬಹುದೊಡ್ಡ ನಟ ಶರತ್ ಕುಮಾರ್. ಅವನು ಎಲ್ಲಿಗೆ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದರು. ಅವರನ್ನು ಹತೋಟಿಯಲ್ಲಿರಿಸಲು ಪೊಲೀಸರು ಲಾಠಿ ಬೀಸಬೇಕಾಗುತ್ತಿತ್ತು. ಈ ಮಧ್ಯೆ ಆ ನಟನೇನಾದರೂ ಕಿಟಕಿಯನ್ನು ಮುಖ ತೋರಿಸಿದರೆ ಮತ್ತೆ ಜನಸಂದಣಿಯಲ್ಲಿ ಹಾಹಾಕಾರ. ನಟ ಕೈ ಬೀಸಿದರೆ ಗುಂಪಿನಲ್ಲಿ ರೋಮಾಂಚನ. ಆ ನಟನನ್ನು ಚಿರಾಯು ಕೂಡ ನೋಡಿದ್ದ. ಚಿರಾಯುವಿಗಿಂತ ಸುಮಾರು ನಲುವತ್ತು ವರುಷ ದೊಡ್ಡವನು ಚಿರಾಯು ಓದುತ್ತಿದ್ದಾಗಲೇ ಅವನು ಸೂಪರ್‌ಸ್ಟಾರ್.
ಅಂಥ ಶರತ್‌ಕುಮಾರನನ್ನು ಚಿರಾಯು ಕೂಡ ಭೇಟಿಯಾಗಬೇಕು ಅಂದುಕೊಂಡಿದ್ದ. ಒಬ್ಬ ಸಾಮಾನ್ಯ ಮನುಷ್ಯ ಎಲ್ಲರಂತೆ ಹುಟ್ಟಿ, ಎಲ್ಲರಂತೆ ಬೆಳೆದು ಎಲ್ಲರಂತೆ ಬದುಕುತ್ತಿದ್ದವನು ಇದ್ದಕ್ಕಿದ್ದಂತೆ ಆರಾಧ್ಯ ದೈವ ಆಗುವ ಪರಿ ಅವನನ್ನು ಅಚ್ಚರಿಗೊಳಿಸುತ್ತಿತ್ತು. ಹಾಗೆ ಅವರನ್ನು ಎತ್ತರೆತ್ತರಕ್ಕೆ ಒಯ್ಯುವ ಅಂಶ ಯಾವುದು. ಅವರ ಪ್ರತಿಭೆಯೋ ಅದೃಷ್ಟವೋ ವಿನಯವೋ ಜಾಣತನವೋ ಜನರ ಹುಂಬತನವೋ ಅನ್ನುವುದು ಗೊತ್ತಾಗುತ್ತಿರಲಿಲ್ಲ ಚಿರಾಯುವಿಗೆ. ಅದು ಅವನಿಗೆ ಇವತ್ತಿಗೂ ಗೊತ್ತಿಲ್ಲ.
ಆದರೆ ಅದರ ಬಗ್ಗೆ ಬೇಸರ ಬಂದದ್ದು ಶರತ್‌ಕುಮಾರ್ ಜೊತೆ ನಾಲ್ಕು ದಿನ ಇರಬೇಕಾಗಿ ಬಂದಾಗ. ಸಿನಿಮಾಗಳಲ್ಲಿ ಅಷ್ಟೆಲ್ಲ ಗುಣಸಂಪನ್ನನಾಗಿ, ಜಾಣನಾಗಿ, ಎಲ್ಲವನ್ನೂ ಬಲ್ಲವನಾಗಿ, ದೊರೆಯಾಗಿ, ಅಬ್ಬರಿಸುವ ರಾಕ್ಷಸನಾಗಿ, ಸಲಹುವ ಶ್ರೀಕೃಷ್ಣನಾಗಿ ಮೋಡಿ ಮಾಡುತ್ತಿದ್ದ ಶರತ್‌ಕುಮಾರ್ ಅಂತರಂಗದಲ್ಲಿ ಎಲ್ಲರಂತಿದ್ದ ಅನ್ನುವ ವಿಚಾರವೇ ಚಿರಾಯು ಒಪ್ಪಿಕೊಳ್ಳಲಾರದ ಸಂಗತಿಯಾಗಿತ್ತು. ಅಭಿಮಾನಿಗಳ ಪ್ರೀತಿಯೆಲ್ಲ ನಟನ ಕುರಿತಾದದ್ದೋ ಅವನು ನಿರ್ವಹಿಸಿದ ಪಾತ್ರದ ಕುರಿತಾದದ್ದೋ ಅಥವಾ ಆ ಪಾತ್ರಗಳ ಮೂಲಕ ಕಂಡುಕೊಂಡ ತಮ್ಮತನದ ಕುರಿತಾದದ್ದೋ ಅನ್ನುವುದು ಚಿರಾಯುವಿಗೆ ಅರ್ಥವೇ ಆಗಿರಲಿಲ್ಲ. ಹಲವಾರು ಹೆಣ್ಣುಗಳನ್ನು ಪ್ರೀತಿಸುವ, ಕಣ್ಣಂಚಲ್ಲೇ ಎಂಥವರನ್ನೂ ತೆಪ್ಪಗಿರಿಸುವ, ಒಂದು ಕೂಗು ಹಾಕಿದರೆ ಇಡೀ ಜನಸ್ತೋಮ ಸ್ತಂಭೀಭೂತವಾಗುವಂಥ ಪಾತ್ರಗಳಲ್ಲಿ ಕಾಣಿಸಿಕೊಂಡ
ಶರತ್ ಚಿರಾಯುವಿನ ಮುಂದೆ ಬೆರಗಿನ ಮೂರ್ತಿಯಾಗಿ ಕೂತಿದ್ದ. ಶರತ್ ಚಿರಾಯು ಬರೆದದ್ದನ್ನೇನೂ ಓದಿರಲಿಲ್ಲ. ಕಾಳಿದಾಸನ ಕಾವ್ಯವನ್ನೂ ಓದಿರಲಿಲ್ಲ. ಷೇಕ್ಸ್‌ಪಿಯರ್ ಗೊತ್ತಿರಲಿಲ್ಲ ಆತನಿಗೆ. ಅಷ್ಟೇ ಯಾಕೆ, ತರಾಸು ಬರೆದ ಕಾದಂಬರಿಗಳನ್ನೂ ಓದಿರಲಿಲ್ಲ. ಆದರೆ ಅವರು ಸೃಷ್ಟಿಸಿದ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುತ್ತಿದ್ದ.
ನಾವೆಲ್ಲ ನಮಗೋಸ್ಕರ ಓದಿಕೊಳ್ಳುತ್ತೇವೆ. ಓದಿದ್ದನ್ನು ಮತ್ತೊಬ್ಬರಿಗೆ ಅಷ್ಟು ಸುಲಭವಾಗಿ ದಾಟಿಸಲಾರೆವು. ಆದರೆ, ಈ ಕಲಾವಿದ ತಾನು ಓದಿಲ್ಲದೇ ಇದ್ದರೂ ಆ ಲೇಖಕ ಹೇಳಿದ್ದನ್ನು ಅಷ್ಟೇ ಪ್ರಭಾವಶಾಲಿಯಾಗಿ ದಾಟಿಸಬಲ್ಲ. ಹಾಗಿದ್ದರೆ ಈ ಓದು ಎಲ್ಲಾ ಅನಗತ್ಯ ಅಲ್ಲವೇ ಎಂದು ಯೋಚಿಸುತ್ತಾ ಕುಳಿತ ಚಿರಾಯುವಿಗೆ ಶರತ್‌ಕುಮಾರ್ ಹೇಳಿದ್ದ: ನಿಮ್ಮನ್ನು ನೋಡಿದರೆ ಅಸೂಯೆ ಆಗುತ್ತೆ. ತುಂಬ ಓದಿಕೊಂಡಿದ್ದೀರಿ, ಬರೆದಿದ್ದೀರಿ. ನಮಗೆ ಆ ಅವಕಾಶವೇ ಸಿಗಲಿಲ್ಲ.
ತನ್ನ ಏಕಾಂತವನ್ನೂ ಖಾಸಗಿ ಬದುಕನ್ನೂ ಕಳೆದುಕೊಂಡು ಶರತ್‌ಕುಮಾರ್ ಎಷ್ಟು ಕಂಗೆಟ್ಟಿದ್ದರು ಅನ್ನುವುದು ಚಿರಾಯುವಿಗೆ ಅರಿವಾದದ್ದು ಆಗಲೇ. ದೇವರಾಗುವ, ದೊಡ್ಡವನಾಗುವ ಕಷ್ಟಗಳೂ ಅವನಿಗೆ ಆಗಲೇ ಗಮನಕ್ಕೆ ಬಂದದ್ದು. ಸುಮಾರು ಐವತ್ತು ವರುಷಗಳ ಕಾಲ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಶರತ್‌ಕುಮಾರ್ ಯಾವತ್ತೂ ಮನೆಯಿಂದಾಚೆ ಬರುವ ಹಾಗಿರಲಿಲ್ಲ. ಬೀದಿಯಲ್ಲಿ ನಡೆಯುವಂತಿರಲಿಲ್ಲ. ಸುತ್ತಲೂ ಸಾವಿರಾರು ಲಕ್ಷಾಂತರ ಜನ ಇರುತ್ತಿದ್ದರು. ಆದರೆ ಒಬ್ಬರೂ ಆತ್ಮೀಯವಾಗಿ ಮಾತಿಗೆ ಸಿಗುತ್ತಿರಲಿಲ್ಲ. ಹೊರಗೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಆರ್ತವಾಗಿ ಮೊರೆಯಿಡುತ್ತಿದ್ದ ಜನಸಾಗರದಲ್ಲಿ ಒಬ್ಬರನ್ನೂ ಹತ್ತಿರ ಕರೆದು ಮಾತಾಡಿಸುವ ಹಾಗಿರಲಿಲ್ಲ. ಶರತ್‌ಕುಮಾರ್‌ಗೆ ಅನಾರೋಗ್ಯ ಅಂದಾಕ್ಷಣ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಹದಿನೆಂಟರ ಹುಡುಗಿಯ ಮುಖ ಹೇಗಿದೆ ಅಂತ ನೋಡುವುದಕ್ಕೂ ಸಾಧ್ಯವಿರಲಿಲ್ಲ.
ಪ್ರೀತಿಸುವವರು ಒಬ್ಬರೋ ಇಬ್ಬರೋ ಇರಬೇಕು. ಲಕ್ಷಾಂತರ ಮಂದಿ ಪ್ರೀತಿಸಿದರೆ ಅದು ಪ್ರೀತಿಯೇ ಅಲ್ಲ ಅನ್ನುವುದೂ ಚಿರಾಯುವಿಗೆ ಆಗಲೇ ಅರ್ಥವಾದದ್ದು. ಆದರೆ ಚಿರಾಯು ಅವನನ್ನು ಎರಡನೇ ಸಾರಿ ಭೇಟಿಯಾದಾಗ ಮತ್ತೊಂದು ಅಚ್ಚರಿ ಎದುರಾಗಿತ್ತು. ನಟನ ಸುತ್ತ ಜನಸಮೂಹ ಇರಲಿಲ್ಲ. ಅವನನ್ನು ಓಲೈಸುವವರು ಇರಲಿಲ್ಲ. ಅವನ ಜೊತೆ ಮಾತಾಡುವವರೂ ಇರಲಿಲ್ಲ. ಒಂದು ಸಂಜೆ ಚಿರಾಯು ಅಲ್ಲಿಂದ ಹೊರಡುವ ಹೊತ್ತಿಗೆ ಶರತ್‌ಕುಮಾರ್, ಅವನ ಕೈ ಹಿಡಕೊಂಡು ಕಣ್ತುಂಬಿಕೊಂಡು ಕೇಳಿದ್ದ.
ನನಗೆ ತುಂಬ ಮಾತಾಡಬೇಕು ಅನ್ನಿಸುತ್ತೆ. ಆದರೆ ಮಾತಾಡುವುದಕ್ಕೆ ಯಾರೂ ಇಲ್ಲ. ಯಾರಿಗೂ ನನ್ನ ಮಾತು ಬೇಕಾಗಿಲ್ಲ. ನೀವಾದರೂ ವಾರಕ್ಕೊಂದು ಸಾರಿ ಬಂದು ಹೋಗುತ್ತೀರಾ?’
ಚಿರಾಯು ಉತ್ತರಿಸಿರಲಿಲ್ಲ. ಅವರ ಕೈಗಳನ್ನು ಮೃದುವಾಗಿ ಅದುಮಿ ಬರುತ್ತೇನೆ ಎಂಬ ಭಾವನೆ ಬರುವಂತೆ ಮಾಡಿದ್ದ. ಚಿರಾಯು ಹೊರಡುತ್ತಿದ್ದಂತೆ ಶರತ್‌ಕುಮಾರ್ ಮತ್ತೆ ಅವನನ್ನು ಕರೆದರು. ಏನೋ ಹೇಳಲಿಕ್ಕೆಂದು ಹೊರಟು ಸುಮ್ಮನಾಗಿದ್ದರು. ನೀವು ಬರೋದು ಬೇಕಾಗಿಲ್ಲ ಅಂತ ಹೇಳುವುದಕ್ಕೆ ಹೊರಟಿದ್ದರು ಅವರು ಅಂದುಕೊಂಡಿದ್ದ ಚಿರಾಯು. ಅದು ಹಾಗೇ ಆಯ್ತು. ಮಾರನೇ ದಿನ ಚಿರಾಯು ಹೋದಾಗ ಗೇಟಿನಲ್ಲಿದ್ದ ವಾಚ್‌ಮನ್, ಅಣ್ಣ ಮನೇಲಿಲ್ಲ ಅಂತ ಹೇಳಿ ವಾಪಸ್ಸು ಕಳುಹಿಸಿದ್ದ. ಅಲ್ಲಿಂದ ಮರಳುವ ಹೊತ್ತಿಗೆ, ಖಾಲಿಗಣ್ಣಾಗಿ ಆಕಾಶ ನೋಡುತ್ತಾ ಮಹಡಿಯ ಕಿಟಕಿಯ ಬಳಿ ನಿಂತಿದ್ದ ಶರತ್‌ಕುಮಾರ್ ಕಾಣಿಸಿದ್ದರು.
ತನ್ನನ್ನು ಬರುವುದು ಬೇಡ ಅಂತ ಹೇಳಿದ್ದು ಶರತ್‌ಕುಮಾರಾ, ಅವರ ಮಕ್ಕಳಾ, ಅವರ ಹೆಂಡತಿಯಾ ಅಥವಾ ಅವರ ಒಳಗಿನ ಭಯವಾ ಅನ್ನುವುದು ಚಿರಾಯುವಿಗೆ ಅರ್ಥವಾಗಿರಲಿಲ್ಲ. ತನ್ನ ಸದ್ಯದ ಸ್ಥಿತಿಯಿಂದ ಹೊರಹೊಮ್ಮುವ ಅನುಕಂಪ , ಒಂದು ಕಾಲದಲ್ಲಿ ತಾನು ಇಡೀ ನಾಡನ್ನೇ ತನ್ನೆಡೆಗೆ ಸೆಳೆದುಕೊಂಡಿದ್ದೆ ಅನ್ನುವ ಸತ್ಯದಿಂದ ಹೊಮ್ಮು ಅಹಂಕಾರ ಎರಡೂ ಬೇಕಾಗಿಲ್ಲ ಎಂಬಂತೆ ಶರತ್‌ಕುಮಾರ್ ಬದುಕುತ್ತಿದ್ದಾರೆ ಅನ್ನಿಸಿತ್ತು ಚಿರಾಯುವಿಗೆ.
ಶೇಷು ಕಾರಿನಿಂದ ಒಂದೊಂದೇ ಸಾಮಾನು ಒಳಗೆ ಕೊಂಡೊಯ್ಯುತ್ತಿದ್ದ. ಮನೆ ಕ್ಲೀನಾಗಿದೆಯೇನೋ ಕೇಳಿದ ಚಿರಾಯು. ಶೇಷು ತಲೆಯಾಡಿಸಿದ. ಒಳಗೆ ಹೋದರೆ ಚಿರಾಯುವಿಗೇ ಆಶ್ಚರ್ಯವಾಯಿತು. ಅಷ್ಟು ಹೊತ್ತಲ್ಲಿ ಶೇಷು ಮನೆಯನ್ನು ಗುಡಿಸಿ, ಒರೆಸಿ, ಚಿರಾಯು ಇಷ್ಟಪಡುವ ಊದುಬತ್ತಿ ಹಚ್ಚಿಟ್ಟು. ಚಿರಾಯು ಪುಸ್ತಕಗಳನ್ನು ಟೇಬಲ್ಲಿನ ಮೇಲೆ ಜೋಡಿಸಿಟ್ಟು ಇಡೀ ರೂಮು ನಳನಳಿಸುವಂತೆ ಮಾಡಿದ್ದ.
ಆ ರೂಮಿನೊಳಗೆ ಕಾಲಿಡುತ್ತಿದ್ದಂತೆ ಅದ್ಯಾವುದೋ ಪರ್‌ಫ್ಯೂಮ್ ಬಳಿದುಕೊಂಡು, ಕತ್ತಿಗೊಂದು ರುದ್ರಾಕ್ಷಿ ಸರ ಹಾಕಿಕೊಂಡು, ತೆಳ್ಳಗಿನ ಖಾದಿ ಜುಬ್ಬಾ ತೊಟ್ಟು, ಯೋಗಿನಿಯ ಹಾಗೆ ಕೂತಿರುತ್ತಿದ್ದ ಯಾಮಿನಿಯನ್ನು ಸಮೀಪಿಸುತ್ತಿದ್ದೇನೆ ಅನ್ನಿಸಿತು. ಚಿರಾಯು ಮೊಬೈಲ್ ತೆಗೆದು ನೋಡಿದ.
ಇಲ್ಲಿ ನೆಟ್ ವರ್ಕ್ ಇಲ್ಲ. ಯಾವ ಫೋನೂ ಬರೋದಿಲ್ಲ. ಬೇಕಿದ್ದರೆ ಆ ಗುಡ್ಡದ ಬದಿಗೆ ಹೋಗಿ ಫೋನ್ ಮಾಡಬೇಕು ಅಂತ ಶೇಷು.
ಕೊನೆಗೂ ತಾನು ಎಲ್ಲರ ಕೈಯಿಂದಲೂ ಪಾರಾದೆ ಅಂದುಕೊಂಡು ಚಿರಾಯು ಹೊರಗೆ ನೋಡಿದ. ಅಷ್ಟೂ ಹೊತ್ತು ಕಷ್ಟಪಟ್ಟು ತಡಕೊಂಡಿದ್ದೆ ಎಂಬಂತೆ ಮಳೆ ಧಾರೆಯಾಗತೊಡಗಿತು.