Saturday, April 26, 2008

13. ತುಂಗೆಯ ತೆನೆ ಬಳುಕಿನಲ್ಲಿ..

ಆವತ್ತು ರಾತ್ರಿ ಅಕಾಲ ಮಳೆ ಸುರಿಯಿತು. ಜೊತೆಗೆ ತಂದಿದ್ದ ಮೂರು ಪೆಗ್ ವಿಸ್ಕಿಯ ಜೊತೆ ಮಳೆಯ ಅಬ್ಬರಕ್ಕೆ ತನ್ನನ್ನು ಒಪ್ಪಿಸಿಕೊಂಡು ಬಿಟ್ಟ ಚಿರಾಯು. ಚಿರಾಯುವಿಗೆ ಜ್ಞಾನಪೀಠ ತಂದುಕೊಟ್ಟ ಕಾದಂಬರಿಯ ಹೆಸರು ಮೇಘ ಮಲ್ಹಾರ’. ಆ ಕಾದಂಬರಿ ಮಳೆಯಲ್ಲೇ ಶುರುವಾಗುತ್ತದೆ, ಮಳೆಯಲ್ಲೇ ಕೊನೆಯಾಗುತ್ತದೆ. ಮಳೆಯನ್ನು ಕಾದಂಬರಿಯ ನಾಯಕಿ ತುಂಗಮ್ಮನ ವಿಷಾದವನ್ನು ಹೇಳುವುದಕ್ಕೆ ಬಳಸಿಕೊಂಡಿರುವುದು ವಿಶೇಷ ಎಂದು ವಿಮರ್ಶಕರು ಮೆಚ್ಚಿಕೊಂಡಿದ್ದರು.
ತುಂಗಮ್ಮನನ್ನು ನೆನಪಿಸಿಕೊಳ್ಳಲು ಯತ್ನಿಸಿದ ಚಿರಾಯು. ಆಕೆಯನ್ನು ಚಿರಾಯು ಮೊದಲ ಸಲ ನೋಡಿದ್ದು ಅಪ್ಪನ ಜೊತೆಗೆ. ಆಕೆಯ ಬಗ್ಗೆ ಅಪ್ಪನಿಗೂ ಅತೀವ ಕುತೂಹಲ ಇದ್ದಂತಿತ್ತು. ಅಮ್ಮ ಅನೇಕ ಸಾರಿ ಅಪ್ಪನ ಹತ್ತಿರ ತುಂಗೆಯ ಬಗ್ಗೆ ಸಿಟ್ಟಿನಿಂದ ಮಾತಾಡುವುದನ್ನು ಕೇಳಿಸಿಕೊಂಡಿದ್ದ. ಆದರೆ ತುಂಗೆ ಮನೆಗೆ ಬಂದಾಗ ಅಮ್ಮ ಅವರನ್ನು ಗೌರವಯುತವಾಗಿಯೇ ನಡೆಸಿಕೊಂಡಿದ್ದಳು. ಅಪ್ಪ ಅವಳ ಮುಂದೆ ಅತೀವ ಸಜ್ಜನನಂತೆ ಓಡಾಡಿದ್ದರು.
ತುಂಗೆಗೆ ಮದುವೆ ಆಗಿರಲಿಲ್ಲ. ಮದುವೆ ಎಂಬ ವ್ಯವಸ್ಥೆಯನ್ನು ಅವರು ಖಂಡಿಸಿ ಮಾತಾಡಿದ್ದನ್ನು ಚಿರಾಯು ಅವರಿವರಿಂದ ಕೇಳಿಸಿಕೊಂಡಿದ್ದ. ಆಕೆಯನ್ನು ಬಸರೂರು ಮಠದ ಸ್ವಾಮೀಜಿ ಶಿಷ್ಯೆಯನ್ನಾಗಿ ಸ್ವೀಕರಿಸಿದ್ದರು. ಅವರಿಬ್ಬರ ಮಧ್ಯೆ ಗುರು-ಶಿಷ್ಯೆಯರ ಸಂಬಂಧವಷ್ಟೇ ಇರಲಿಲ್ಲ ಅಂತ ಜನ ಮಾತಾಡಿಕೊಳ್ಳುತ್ತಿದ್ದರು. ಬಸರೂರಿನ ಸ್ವಾಮಿಗಳನ್ನು ಬುಟ್ಟಿಗೆ ಹಾಕಿಕೊಂಡವಳು ಎಂದೆಲ್ಲ ಸುತ್ತೂರಿನಲ್ಲಿ ಸುದ್ದಿಯಾಗಿತ್ತು.
ಆದರೆ ತುಂಗೆಯನ್ನು ನೋಡಿದಾಕ್ಷಣ ಚಿರಾಯುವಿಗೆ ಹಾಗೇನೂ ಅನ್ನಿಸಿರಲಿಲ್ಲ. ಅವರ ಕಣ್ಣುಗಳಲ್ಲಿ ಎಂದೂ ಕಾಣದ ಯಾರಲ್ಲೂ ಕಾಣದ ಅಭಯವನ್ನು ಚಿರಾಯು ಗುರುತಿಸಿದ. ಅವರೊಂದಿಗೆ ಯಾರೇ ಇದ್ದರೂ ತುಂಬ ನಿರ್ಭಯದಿಂದ ಇರಬಹುದು ಅನ್ನಿಸಿತ್ತು. ಆಮೇಲಾಮೇಲೆ ತುಂಬ ಭಯವಾದಾಗ, ಮಳೆಗಾಲದಲ್ಲಿ ಎದೆ ಝಲ್ಲನಿಸುವಂತೆ ಸಿಡಿಲು ಆರ್ಭಟಿಸಿದಾಗ, ಕಟ್ಟಿರುಳಲ್ಲಿ ಒಬ್ಬನೇ ಗದ್ದೆ ಹಾದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ತುಂಗೆ ನೆನಪಾಗುತ್ತಿದ್ದರು. ಅವರ ಅಭಯ ಹಸ್ತ ತನ್ನನ್ನು ಸದಾ ಕಾಪಾಡುತ್ತದೆ ಅನ್ನಿಸುತ್ತಿತ್ತು. ಎಲ್ಲ ಭಯವನ್ನು ಹೊಡೆದೋಡಿಸುವ ಶಕ್ತಿ ಅವರಿಗಷ್ಟೇ ಇದೆ ಅನ್ನಿಸುತ್ತಿತ್ತು.
ಆಮೇಲೆ ಅವರನ್ನು ಚಿರಾಯು ಒಂದೆರಡು ಸಾರಿ ನೋಡಿದ್ದ ಅಷ್ಟೇ. ಅವರ ಜೊತೆಗೆ ಮಾತಾಡಬೇಕು ಅಂತಾಗಲೀ, ಅವರ ಬಗ್ಗೆ ತಿಳಿದುಕೊಳ್ಳಬೇಕು ಎಂದಾಗಲೀ ಅವನಿಗೆ ಅನ್ನಿಸಿರಲೇ ಇಲ್ಲ. ಅವರ ಬಗ್ಗೆ ಯಾರಾದರೂ ಕೀಳಾಗಿ ಮಾತಾಡಿದಾಗ ಮಾತ್ರ ಚಿರಾಯುವಿಗೆ ಸಿಟ್ಟು ಬರುತ್ತಿತ್ತು. ಅವರು ಸರೀಕರಾಗಿದ್ದರೆ ರೇಗುತ್ತಿದ್ದ. ಹಿರಿಯರಾಗಿದ್ದರೆ ಅಲ್ಲಿಂದ ಎದ್ದು ಹೋಗುತ್ತಿದ್ದ.
ಆಗಲೂ ಚಿರಾಯುವಿಗೆ ತುಂಗೆ ತನ್ನ ಕಾದಂಬರಿಯ ಪಾತ್ರವಾಗಬಹುದು ಅನ್ನಿಸಿರಲಿಲ್ಲ. ಚಿರಾಯು ಲಂಡನ್ನಿಗೆ ಹೋಗಿ, ಅಲ್ಲಿಂದ ಜರ್ಮನಿಗೆ ಹೋಗಿ ಬೆಂಗಳೂರಿಗೆ ಮರಳಿ ಸಾಹಿತ್ಯದಲ್ಲಿ ದೊಡ್ಡ ಹೆಸರಾಗಿ ಪತ್ರಿಕೆಗಳಲ್ಲಿ ಟೀವಿಯಲ್ಲಿ ಕಾಣಿಸತೊಡಗಿದ ನಂತರದ ದಿನಗಳಲ್ಲಿ ಬಸರೂರು ಮಠಕ್ಕೆ ಹೋಗಿದ್ದ. ಆಗ ಅವನಿಗೆ ಮತ್ತೆ ತುಂಗೆ ನೆನಪಾಗಿದ್ದರು. ತನ್ನನ್ನು ಜೊತೆಗೆ ಕರೆದೊಯ್ದ ಮೊಕ್ತೇಸರ ಶಂಕರನಾರಾಯಣ ನಾವಡರ ಹತ್ತಿರ ತುಂಗೆಯ ಬಗ್ಗೆ ಕೇಳಿದ್ದ ಚಿರಾಯು. ಅವರು ಅತ್ಯಂತ ತಿರಸ್ಕಾರದಿಂದ ಹೇಳಿದ ಮಾತು ಚಿರಾಯುವಿಗೆ ಇನ್ನೂ ನೆನಪಿದೆ;
ಮಠದ ಮಾನ ತೆಗೆದಳು ಮಾಟಗಾತಿ. ಬಸರೂರು ಸ್ವಾಮೀಜಿಗಳನ್ನು ಕೊನೆಯ ದಿನದ ತನಕವೂ ಹತೋಟಿಯಲ್ಲಿಟ್ಟುಕೊಂಡಿದ್ದಳು. ಮಠದ ಬೀಗದ ಕೈಯನ್ನೇ ಅವಳ ಕೈಗೆ ಕೊಟ್ಟುಬಿಟ್ಟಿದ್ದರು ಸ್ವಾಮೀಜಿ. ಯಾವಾಗ ಅವಳ ಆಡಳಿತ ಶುರುವಾಗಿತೋ, ಭಕ್ತಾದಿಗಳೆಲ್ಲ ಮಠಕ್ಕೆ ಕಾಲಿಡುವುದನ್ನೂ ಬಿಟ್ಟುಬಿಟ್ಟರು. ದಿನಾ ಅನ್ನಸಂತರ್ಪಣೆ ನಡೆಯುತ್ತಿದ್ದದ್ದು ನಿಂತೇ ಹೋಯ್ತು. ಸ್ವಾಮೀಜಿಗಳು ಕಾಲವಶರಾದಾಗ ಐವತ್ತು ಜನ ಇರಲಿಲ್ಲ ಗೊತ್ತುಂಟಾ? ಆವತ್ತು ಬಿದ್ದುಹೋದ ಮರ್ಯಾದೆಯನ್ನು ಮರಳಿ ತರೋದಕ್ಕೆ ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವತ್ತಿಗೂ ಜನ ಅದರ ಬಗ್ಗೆ ಮಾತಾಡಿಕೊಳ್ತಾರೆ. ನಾನು ಉತ್ತರ ಭಾರತ ಪ್ರವಾಸ ಹೋದಾಗ ಬಸರೂರು ಮಠ ಅಂದಾಕ್ಷಣ ಒಂದಷ್ಟು ಮಂದಿ ಮುಸಿಮುಸಿ ನಕ್ಕಿದ್ದರು’.
ತುಂಗಮ್ಮ ಈಗೆಲ್ಲಿದ್ದಾರೆ’ ಕೇಳಿದ್ದ ಚಿರಾಯು.
ಮಾಡಿದ ಪಾಪ ತೊಳೀತಾ ಬಿದ್ದಿದ್ದಾಳೆ ನೋಡಿ’ ಅಂತ ನಾವಡರು ಬೊಟ್ಟು ಮಾಡಿ ತೋರಿಸಿದ್ದ ತುಂಗಮ್ಮನ ಮನೆಗೆ ಹೋಗಿ ಬಂದಿದ್ದ ಚಿರಾಯು. ಅಲ್ಲಿಗೆ ಹೋಗಿ ಅವರನ್ನು ಆ ಸ್ಥಿತಿಯಲ್ಲಿ ನೋಡಬಾರದಿತ್ತು ಅನ್ನಿಸಿತ್ತು. ತುಂಗಮ್ಮ ಒಂಬತ್ತು ತಿಂಗಳಿಂದ ಹಾಸಿಗೆ ಹಿಡಿದಿದ್ದರು. ಬೆನ್ನು ಹುಣ್ಣಾಗಿ ಎದ್ದು ಕೂಡಿಸುವವರಿಲ್ಲದೆ, ಸ್ನಾನ ಮಾಡಿಸುವವರಿಲ್ಲದೆ ಇಡೀ ಮನೆ ನಾರುತ್ತಿತ್ತು. ಮಠದಿಂದ ಲಪಟಾಯಿಸಿದ ಆಸ್ತಿಯನ್ನೆಲ್ಲ ಆಕೆ ಎಲ್ಲೋ ಕೂಡಿಟ್ಟಿದ್ದಾಳೆ ಅನ್ನುವ ಗುಮಾನಿಯಿಂದ ನರಸಿಂಹ ಭಟ್ಟರ ಕುಟುಂಬ ತುಂಗಮ್ಮನ ಆರೈಕೆ ಮಾಡುತ್ತಾ ಬಂದಿತ್ತಂತೆ. ಆದರೆ ತುಂಗಮ್ಮ ಆ ಸಂಪತ್ತನ್ನೂ ಬಂಗಾರವನ್ನೂ ಎಲ್ಲಿ ಬಚ್ಚಿಟ್ಟಿದ್ದೇನೆ ಅಂತ ಬಾಯಿಬಿಟ್ಟಿರಲಿಲ್ಲ. ಚಿರಾಯು ಹೋಗುವ ಹೊತ್ತಿಗೆ ಅವರೂ ತುಂಗಮ್ಮನ ಕೈ ಬಿಟ್ಟಿದ್ದರು.
ಆ ಸ್ಥಿತಿಯಲ್ಲಿದ್ದ ತುಂಗಮ್ಮನನ್ನು ಚಿರಾಯು ಆಸ್ಪತ್ರೆಗೆ ಸೇರಿಸಿದ್ದ. ಅವರ ಅಷ್ಟೂ ಖರ್ಚನ್ನು ತಾನೇ ನೋಡಿಕೊಳ್ಳುವುದಾಗಿ ಹೇಳಿದ್ದ. ಅಷ್ಟು ಹೊತ್ತಿಗಾಗಲೇ ರೋಗ ಉಲ್ಬಣಿಸಿದ್ದರಿಂದ ಆಸ್ಪತ್ರೆ ಸೇರಿದ ನಾಲ್ಕೇ ದಿನಕ್ಕೆ ತುಂಗಮ್ಮ ತೀರಿಕೊಂಡಿದ್ದಳು. ಆದರೆ, ಕೊನೆಯ ದಿನಗಳಲ್ಲಿ ಏನನ್ನೋ ಹುಡುಕಾಡುವಂತೆ ಅತ್ತಿತ್ತ ಚಲಿಸುತ್ತಿದ್ದ ಅವಳ ಕಣ್ಣುಗಳನ್ನು ಆ ನೋವಿನಲ್ಲೂ ಬದುಕುವ ಆಸೆಯನ್ನು ಹಿಡಿದಿಟ್ಟಂತಿದ್ದ ಅವಳ ದೇಹದ ಮೊಂಡು ಹಠವನ್ನೂ ಚಿರಾಯುವಿಗೆ ಮರೆಯುವುದಕ್ಕಾಗಿರಲಿಲ್ಲ.
ತುಂಗೆಯನ್ನು ಸುಡುವುದಕ್ಕೆ ವ್ಯವಸ್ಥೆ ಮಾಡಿಸಿದ ದಿನ ಧಾರಾಕಾರ ಮಳೆಯಾಗಿತ್ತು. ಮೂರು ದಿನವಾದರೂ ಮಳೆ ನಿಲ್ಲಲಿಲ್ಲ. ಅರ್ಧಂಬರ್ಧ ಸುಟ್ಟಿದ್ದ ಶವವನ್ನು ಕೊನೆಗೆ ಹೂಳಬೇಕಾಗಿ ಬಂತು. ಅವಳು ಹೀಗೆ ಸಾಯುತ್ತಾಳೆ ಅಂತ ನಾನು ಆವತ್ತೇ ಹೇಳಿದ್ದೆ ಎಂದ ನಾವಡರ ದನಿಯಲ್ಲಿದ್ದ ರೋಷವನ್ನು ಚಿರಾಯುವಿಗೆ ತಡೆದುಕೊಳ್ಳುವುದಕ್ಕೆ ಸಾಧ್ಯವೇ ಆಗಿರಲಿಲ್ಲ.
ಅದೇ ರಾತ್ರಿ ಚಿರಾಯು ಬರೆಯುವುದಕ್ಕೆ ಆರಂಭಿಸಿದ ಕಾದಂಬರಿ ಅದು. ಅದರಲ್ಲಿ ನಾವಡರು ಖಳನಾಯಕನಾಗಿ ಚಿತ್ರಿತವಾಗಿದ್ದರು. ಬಸರೂರು ಸ್ವಾಮಿಗಳ ದೈವ ಸಾಕ್ಷಾತ್ಕಾರಕ್ಕೆ ಸೊಗಸಾಗಿ ಹಾಡಬಲ್ಲ ತುಂಗೆ ಸಾಥಿಯಾಗಿದ್ದಳು. ಆಕೆ ಹಾಡುವುದನ್ನು ನಿಲ್ಲಿಸಿದ ಕ್ಷಣ ಬಸರೂರು ಸ್ವಾಮಿಗಳು ಕಣ್ಮುಚ್ಚುತ್ತಾರೆ. ಆಕೆಯನ್ನು ತನ್ನ ಹಾಡಿನಿಂದ ಅವರನ್ನು ಮತ್ತೆ ಬದುಕಿಸುತ್ತೇನೆ ಎಂಬಂತೆ ಸುರಿವ ಮಳೆಯಲ್ಲಿ ಹಾಡುತ್ತಾಳೆ.
ಚಿರಾಯುವಿಗೆ ತಾನು ಇನ್ನೇನೇನು ಬರೆದಿದ್ದೆ ಅನ್ನುವುದು ನೆನಪಾಗಲಿಲ್ಲ. ಅದನ್ನು ಅವನು ಮತ್ತೊಮ್ಮೆ ಓದುವುದಕ್ಕೂ ಹೋಗಿರಲಿಲ್ಲ. ಓದುವ ಧೈರ್ಯವೂ ಇರಲಿಲ್ಲ. ಆದರೆ ಕಾದಂಬರಿ ಪ್ರಕಟವಾದ ನಂತರ ನಾವಡರು ಹೀಗೆ ಮಾಡಬಾರದಿತ್ತು ನೀವು ಎಂದು ಹೇಳಿಹೋಗಿದ್ದರು. ಆ ಮಾತಲ್ಲಿ ರೋಷವಿರಲಿಲ್ಲ.
ನೆಲಬಿರಿಯುವಂತೆ ಮತ್ತೊಂದು ಸಿಡಿಲು ಅಪ್ಪಳಿಸಿತು. ಚಿರಾಯುವಿಗೆ ಅರೆಕ್ಷಣ ಭಯವಾಯಿತು.ಶೇಷು ಕುಳಿತಿದ್ದವನು ಬೆಚ್ಚಿ ಎದ್ದು ನಿಂತ. ತುಂಗೆಯ ಕಣ್ಣುಗಳಲ್ಲಿ ಕಂಡ ಅಭಯ ನೆನಪಾಯಿತು.