Wednesday, April 23, 2008

8. ಬೆಟ್ಟಗಳ ನಡುವೆ ಸಾಗುವ ದಾರಿ ಹಿತವಲ್ಲ

ಏಕಾಂತದಿಂದ, ಮನೆಯಿಂದ ದೂರ ಬರುವುದರಿಂದ, ಗುಂಪಿನಿಂದ ಆಚೆ ಉಳಿಯುವುದರಿಂದ ಬರೆಯುವುದಕ್ಕೆ ಅನುಕೂಲವಾಗುತ್ತದೆ ಅನ್ನುವ ನಂಬಿಕೆ ಚಿರಾಯುವಿಗಿಲ್ಲ. ಗುಂಪಿನಲ್ಲಿದ್ದಾಗ ಒಂಟಿತನವನ್ನು, ಒಂಟಿಯಾಗಿದ್ದಾಗ ಜನಜಂಗುಳಿಯನ್ನೂ ಅವನು ಅನುಭವಿಸಿದ್ದಾನೆ. ಹೀಗೆ, ಬೆಂಗಳೂರಿಂದ ದೂರ ಬಂದು ಕುಳಿತು ಬರೆಯಲು ಯೋಚಿಸಲು ಯತ್ನಿಸಿದಾಗಲೂ ಮುತ್ತಿಕೊಳ್ಳುತ್ತಿದ್ದವರು ಅದೇ ಬೆಂಗಳೂರಿನ ಗೆಳೆಯರು. ನಡುನಡುವೆ ಹಣಿಕಿ ಹಾಕುವ ಬಾಲ್ಯದ ಗೆಳೆಯರು.
ಬರೀ ಗೆಳತಿಯರನ್ನೇ ನೆನಪಿಸಿಕೊಳ್ಳುತ್ತಿದ್ದೇನಲ್ಲ ಅನ್ನಿಸಿ ಚಿರಾಯು ನಕ್ಕ. ತನ್ನ ವಿರೋಧಿಗಳು ತನ್ನ ಬಗ್ಗೆ ಮಾಡಿಕೊಂಡು ಬಂದ ಟೀಕೆ ಅದೊಂದೇ. ಹೆಣ್ಣುಮಕ್ಕಳನ್ನು ಚಿರಾಯು ಜಾಸ್ತಿ ನೆಚ್ಚಿಕೊಳ್ಳುತ್ತಾನೆ. ಪ್ರೀತಿಸುತ್ತಾನೆ. ಅವರಿಗೋಸ್ಕರ ಏನು ಬೇಕಾದರೂ ಮಾಡುತ್ತಾನೆ. ಅವರ ಕೆಟ್ಟ ಕೃತಿಗಳಿಗೆ ಒಳ್ಳೆಯ ಮುನ್ನುಡಿ ಬರೆಯುತ್ತಾನೆ. ಯಾವ್ಯಾವುದೋ ಸಮಾರಂಭದಲ್ಲಿ ನೋಡಿ. ಇವತ್ತು ಬರೀತೀರೋ ಕವಿಗಳ ಪೈಕಿ ನೀವು ಗಮನಿಸಬೇಕಾದ ಹೆಸರು ಮಂಜುಳಾ ದೇವಿ’ ಅಂತ ಒಂದು ಹೇಳಿಕೆ ಕೊಟ್ಟು ಆಕೆಯನ್ನು ಮೆಚ್ಚಿಸುತ್ತಾನೆ. ಆದರೆ ತಾನು ಅವರ ಸೌಂದರ್ಯಕ್ಕೆ ಮಣಿದೋ, ಅವರನ್ನು ಬಳಸಿಕೊಳ್ಳಬೇಕು ಅನ್ನುವ ಉದ್ದೇಶದಿಂದಲೋ ಹಾಗೆ ಮಾಡಿರಲಿಲ್ಲ ಅನ್ನುವುದನ್ನು ಚಿರಾಯು ಹೇಳಿದರೆ ಯಾರೂ ಒಪ್ಪುತ್ತಲೇ ಇರಲಿಲ್ಲ.
ಗಂಡು ತನ್ನ ಅಹಂಕಾರವನ್ನು ಮರೆತು ಒಂದು ಹೆಣ್ಣಿನ ಜೊತೆ ಮಾತ್ರ ಬೆರೆಯಬಲ್ಲ. ಹೆಣ್ಣು ಕೂಡ ಅಷ್ಟೇ. ಆಕೆ ತನ್ನ ಮತ್ಸರವನ್ನು ಬದಿಗಿಟ್ಟು, ಸೌಂದರ್ಯವನ್ನು ಒತ್ತಟ್ಟಿಗಿಟ್ಟು ಗಂಡಸಿನ ಜೊತೆ ಮಾತ್ರ ಬೆರೆಯಬಲ್ಲಳು. ಗೆಳತಿಯ ಜೊತೆಗಿದ್ದಾಗ ನಾನು ನಾನಾಗಿರುತ್ತೇನೆ. ಆರಂಭದಲ್ಲಿ ಅವಳನ್ನು ನಂಬಿಸುವ, ಒಪ್ಪಿಸುವ, ಅವಳಿಗೆ ತಾನು ಅರ್ಹ ಅನ್ನಿಸಿಕೊಳ್ಳುವ ಇರಾದೆಯಿರುತ್ತದೆ ನಿಜ. ಆದರೆ ಕ್ರಮೇಣ ಅದು ಪ್ರೀತಿಯಲ್ಲಿ, ಕಾಮದಲ್ಲಿ, ವಾಂಛೆಯಲ್ಲಿ ಕರಗಿಹೋಗಿ ಇಬ್ಬರೇ ಉಳಿದುಬಿಡುತ್ತೇವೆ. ಇಬ್ಬರಿದ್ದಾಗಲೂ ಒಬ್ಬರೇ ಇರುವಷ್ಟು ನಿಸೂರಾಗಿರುವುದು ಗೆಳತಿಯರ ಜೊತೆ ಮತ್ತು ಮಕ್ಕಳ ಜೊತೆಗಷ್ಟೇ ಸಾಧ್ಯ. ಹೆಣ್ಣಿಗೂ ಹಾಗನ್ನಿಸಿರಬಹುದು. ಪೊಳ್ಳು ಬಿಗುಮಾನಗಳನ್ನು ಸುಳ್ಳು ಘನತೆಗಳನ್ನು ಕಳಚಿಹಾಕಿ ತೊಡಗಿಸಿಕೊಳ್ಳಬಹುದಾದ ಸಂಬಂಧ ಯಾಮಿನಿಯ ಜೊತೆ ಮಾತ್ರ ಸಾಧ್ಯ ಎಂದು ಎಷ್ಟೋ ಸಾರಿ ಚಿರಾಯುವಿಗೆ ಅನ್ನಿಸಿದೆ.
ಕಾಲಿಂಗೆ ಬೆಲ್ ಸದ್ದಾಯಿತು. ಶೇಷು ಮರಳಿರಬೇಕು ಅಂದುಕೊಂಡ. ಅವನು ತರುವ ಪುಸ್ತಕಗಳನ್ನು ಓದುವುದಕ್ಕೆ ಬೇಕಾದ ವ್ಯವಧಾನ ಈಗುಳಿದಿಲ್ಲ ಅನ್ನಿಸಿತು. ಹಳೆಯ ಪುಸ್ತಕಗಳನ್ನು ಓದುವುದರಿಂದ ಏನೂ ಬದಲಾಗುವುದಿಲ್ಲ. ಮತ್ತೆ ನಾವು ಹಳವಂಡಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. ಭೂತ ಕಾಲಕ್ಕೆ ಮರಳುವುದು ಜೀವಂತಿಕೆಯ ಲಕ್ಷಣ ಅಲ್ಲ ಅಂದುಕೊಳ್ಳುತ್ತಾ ಚಿರಾಯು ಎದ್ದು ಹೋಗಿ ಬಾಗಿಲು ತೆರೆದ. ಹೊರಗೆ ಅಪರಿಚಿತ ಸುಂದರಿಯೊಬ್ಬಳು ನಿಂತಿದ್ದಳು. ಅವಳ ಹಿಂದೆಯೇ ಒಬ್ಬ ಕರಿಯ ಕೆಮರಾ ಹಿಡಕೊಂಡು ನಿಂತಿದ್ದ.
ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ ಸರ್. ನಿಮ್ಮ ಸಂದರ್ಶನ ಬೇಕಾಗಿತ್ತು ಅಂದಳು ಸುಂದರಿ. ಚಿರಾಯು ಮೌನವಾಗಿ ಅವಳನ್ನೇ ನೋಡಿದ. ರೇಗಬೇಕು ಅನ್ನಿಸಿತು. ರೇಗುವುದರಿಂದ ಯಾವ ಲಾಭವೂ ಇಲ್ಲ. ಅದನ್ನು ಕೂಡ ಸುದ್ದಿ ಮಾಡುತ್ತಾರೆ. ಸಂದರ್ಶನ ನಿರಾಕರಿಸಿದರೂ ಸುದ್ಧಿಯೇ. ಅವಳನ್ನು ಒಳ್ಳೆಯ ಮಾತಿನಿಂದ ಸಾಗಹಾಕುವುದು ಸರಿಯಾದ ದಾರಿ ಅಂದುಕೊಂಡು ಅವಳ ಕಣ್ಣನ್ನೇ ನೋಡುತ್ತಾ ಚಿರಾಯು ಹೇಳಿದ:
ಸಂಜೆ ಹೊತ್ತಿಗೆ ಬನ್ನಿ. ನಿಮ್ಮ ಪ್ರಶ್ನೆಗಳಿದ್ದರೆ ಕೊಟ್ಟು ಹೋಗಿ. ರೆಡಿಯಾಗಿರುತ್ತೇನೆ. ಅಲ್ಲೀತನಕ ನೀವು ಬೇಕಿದ್ದರೆ, ಆ ಬೆಟ್ಟದ ಕೆಳಗಿರುವ ಗೆಸ್ಟ್‌ಹೌಸ್‌ನಲ್ಲಿ ರೆಸ್ಟ್ ತಗೋಬಹುದು’.
ಥ್ಯಾಂಕ್ಯೂ ಅಂದವಳ ಕಣ್ಣಲ್ಲಿ ಅಚ್ಚರಿಯಿತ್ತು. ಇಷ್ಟು ಸುಲಭವಾಗಿ ಸಂದರ್ಶನ ಸಿಗುತ್ತದೆ ಅನ್ನುವ ನಂಬಿಕೆ ಅವಳಿಗೇ ಇದ್ದಿರಲಿಲ್ಲ ಅನ್ನುವುದೂ ಸ್ಪಷ್ಟವಾಯಿತು. ಬೈಯಬಹುದು, ರೇಗಾಡಬಹುದು, ಆಗೋದಿಲ್ಲ ಅಂತ ಖಂಡತುಂಡವಾಗಿ ಹೇಳಿ ಬಾಗಿಲು ಹಾಕಿಕೊಳ್ಳಬಹುದು ಎಂದೆಲ್ಲ ಆಕೆ ಊಹಿಸಿದ್ದಿರಬೇಕು. ಅವಳನ್ನೇ ಸಂಪಾದಕ ಕಳುಹಿಸಿದ್ದೂ ತಾನು ಒಪ್ಪಿಕೊಳ್ಳಲಿ ಅನ್ನುವ ಕಾರಣಕ್ಕೇ ಇರಬೇಕು. ಅಭಿಮಾನ ಸೂಸುವ ಕಣ್ಣುಗಳಿಂದ ತನ್ನನ್ನು ನೋಡುತ್ತಾ ನಿಂತವಳ ಭಾವವೂ ನಟನೆ ಇರಬಹುದು. ಭಂಗಿಯೂ ಪೊಳ್ಳಿರಬಹುದು.
ನಾನು ವಂದನಾ. ವಂದನಾ ರಾವ್’ ಎಂದು ಪರಿಚಯಿಸಿಕೊಂಡಳು ಸುಂದರಿ. ಹೆಣ್ಣನ್ನು ಸುಂದರಿ ಅಂತ ಕರೆಯುವುದನ್ನು ಖಂಡಿಸಿದ ಬೆಂಗಾಲಿ ಕವಿ ಸುಪರ್ಣಾ ದಾಸ್‌ಗುಪ್ತ ನೆನಪಾದಳು. ಆಕೆಯನ್ನು ಮೊದಲ ಬಾರಿಗೆ ನೋಡಿದಾಗ ಚಿರಾಯು ನೀನು ತುಂಬುಸುಂದರಿ’ ಅಂದಿದ್ದ. ಅದಕ್ಕವಳು ತೀರ ಗಂಭೀರವಾಗಿ ನೋಡು ಚಿರಾಯು, ಹೆಣ್ಣನ್ನು ನೋಡಿದ ತಕ್ಷಣ ಸುಂದರಿ ಅಂತ ಗುರುತಿಸುವುದು, ಕರೆಯುವುದು, ಅಂದುಕೊಳ್ಳುವುದು ಸ್ತ್ರೀವಿರೋಧಿ ಚಿಂತನೆ. ಅವಳ ಸತ್ವ ಏನು ಅನ್ನುವುದನ್ನು ನೋಡು. ನನ್ನ ಕವಿತೆಗಳನ್ನು ಮೆಚ್ಚಿಕೋ. ನನ್ನನ್ನು ಸುಂದರಿ ಎಂದು ಕರೆದು ಅವಮಾನಿಸಬೇಡ’ ಅಂದಿದ್ದಳು. ಆಮೇಲೆ ಆ ಸೆಮಿನಾರಿನಲ್ಲಿ ನಾಲ್ಕೂ ದಿನ ಅದೇ ಚರ್ಚೆಯಾಗಿತ್ತು. ಅದನ್ನೇ ರಾತ್ರಿ ಯಾಮಿನಿಗೆ ಹೇಳಿದಾಗ ಆಕೆ ನಾಲ್ಕೈದು ನಿಮಿಷ ನಕ್ಕಿದ್ದಳು. ನಿನಗೆ ಹಾಗೇ ಆಗಬೇಕು ಅಂದಿದ್ದಳು.
ಚಿರಾಯು ಸೆಮಿನಾರ್ ಮುಗಿಸಿ ಬಂದ ನಂತರ ಅದರ ಬಗ್ಗೆ ಯಾಮಿನಿ ಒಂದರ್ಧ ಗಂಟೆ ಮಾತಾಡಿದ್ದಳು. ಸೌಂದರ್ಯ ಅನ್ನುವುದು ಅಸ್ತಿತ್ವದ ಪ್ರಶ್ನೆಯಾ? ಸುಂದರಿ ಅಂತ ಕರೆಯುವುದರಲ್ಲಿ ಏನು ತಪ್ಪಿದೆ? ನಾವು ದೇವಿಯರನ್ನೂ ಸುಂದರಿ ಅಂತ ಹೊಗಳುವುದನ್ನು ರೂಢಿಸಿಕೊಂಡವರು. ಬಂಗಾಲಿಗಳು ಕಾಳಿದೇವಿಯನ್ನು ಏನಂಥ ಹೊಗಳುತ್ತಾರೆ ಕೇಳಬೇಕಿತ್ತು. ನೀನು ಹಾಗೆಲ್ಲ ಸುಮ್ಮನಾಗಕೂಡದು ಚಿರಾಯು. ಜಗಳ ಆಡಬೇಕು. ಕಾಳಿಯಂಥ ಶಕ್ತಿಮಾತೆಯನ್ನೂ ನೀವು ಸುಂದರಿ ಅಂತ ಕರೆಯುತ್ತೀರಲ್ಲ. ಸುಂದರಿ ಸತ್ವಶಾಲಿಯೂ ಆಗಿರಬಾರದು ಅಂತೇನಿಲ್ಲವಲ್ಲ. ಕಣ್ಣಿಗೆ ಕಾಣುವ ಗುಣವನ್ನು ತಾನೇ ತಕ್ಷಣ ಗುರುತಿಸುವುದು. ಅಷ್ಟಕ್ಕೂ ಸುಂದರಿ ಅಂದದ್ದು ಕೇವಲ ಔಪಚಾರಿಕತೆ ಅಷ್ಚೇ. I didn't mean it ಅಂದುಬಿಡಬೇಕಿತ್ತು ಎಂದಿದ್ದಳು. ಅವಳನ್ನು ಅವಮಾನಿಸಬೇಕು ಅಂತ ಚಿರಾಯುವಿಗೂ ಅನ್ನಿಸಿತ್ತು. ಆದರೆ ಆಗ ಧೈರ್ಯ ಬಂದಿರಲಿಲ್ಲ. ಮುಂದೊಂದು ದಿನ ಅವಳ ಕವಿತೆಗಳ ಬಗ್ಗೆ ಬರೆಯುತ್ತಾ ಅವುಗಳನ್ನು ಆಕರ್ಷಕ ಶಬ್ದಗಳ ಜಾಲ ಎಂದು ಕರೆದಿದ್ದ ಚಿರಾಯು. ಸುಪರ್ಣಾ ದಾಸ್‌ಗುಪ್ತಾರ ಕವಿತೆಗಳು ಮದುಮಗಳ ಹಾಗೆ. ಆ ಬೆಳಕು, ಪರಿಸರ ಮತ್ತು ಅಲಂಕಾರದಲ್ಲಿ ಸೊಬಗು ತುಂಬಿಕೊಂಡಂತೆ ಕಾಣುತ್ತದೆ. ಆದರೆ, ಒಮ್ಮೆ ಆ ಅಲಂಕಾರ ಕಳಚಿ, ಸಹಜ ಪರಿಸರದಲ್ಲಿ ತಂದು ನಿಲ್ಲಿಸಿದರೆ ಹಳೇ ನೈಟಿ ಹಾಕಿಕೊಂಡ, ಬಸವಳಿದು ರಕ್ತಹೀನತೆಯಿಂದ ಬಳಲುವ ಬಂಗಾಲದ ಕಾರ್ಮಿಕ ಹೆಣ್ಣುಮಗಳಂತೆ ಕಾಣುತ್ತವೆ. ಬ್ಯೂಟಿಪಾರ್ಲರ್ ಕವಿತೆಗಳವು ಎಂದು ಟೀಕಿಸಿದ್ದ. ಆಗ ಸುಪರ್ಣಾ ಜಗಳಕ್ಕೇ ನಿಂತಿದ್ದಳು. ಚಿರಾಯು ಆಗ ಕೂಡ ಮೌನವಾಗಿಯೇ ಅದನ್ನು ಎದುರಿಸಿದ್ದ. ಆದರೆ ಬ್ಯೂಟಿಪಾರ್ಲರ್ ಕವಿ ಅನ್ನುವ ಹೆಸರು ಅವಳಿಗೆ ಅಂಟಿಕೊಂಡುಬಿಟ್ಟಿತ್ತು.
ನಿಮ್ಮ ಮನೆಯ ಕೆಲವು ಶಾಟ್ಸ್ ತೆಗೆದುಕೊಳ್ಳಲಾ? ನೀವು ಬರೆಯೋ ಜಾಗ, ನಿಮ್ಮ ಲೈಬ್ರರಿ, ಅಡುಗೆ ಮನೆ. ನೀವೇ ಅಡುಗೆ ಮಾಡಿಕೊಂಡು ನಿಮ್ಮ ಬಟ್ಟೆ ನೀವೇ ಒಗೆದುಕೊಳ್ಳುತ್ತಾ ಸ್ವಾವಲಂಬಿಯಾಗಿ ಬದುಕುತ್ತಿದ್ದೀರಿ ಅಂತ ಕೇಳಿದೆ. ಗಾಂಧೀ ಕೂಡ ಹಾಗೆ ಮಾಡುತ್ತಿದ್ದರಲ್ಲವಾ?’ ವಂದನಾರಾವ್ ಕೇಳಿದಳು.
ಸಂಜೆ ಎಲ್ಲಾ ಮಾಡೋಣಂತೆ’ ಎಂದು ತೀರ ಸಹಜವಾಗೆಂಬಂತೆ ಅವಳ ತುಂಬುಗೆನ್ನೆಗಳನ್ನು ತಟ್ಟಿ ತಲೆಯನ್ನೊಮ್ಮೆ ಮುಟ್ಟಿ ಕಳಿಸಿದ ಚಿರಾಯು.
ಅವಳು ಹೋದ ತುಂಬ ಹೊತ್ತಿನ ತನಕ ಆಕೆ ನಿಂತ ಜಾಗ ಘಮಗುಡುತ್ತಿದೆ ಅನ್ನಿಸಿತು ಚಿರಾಯುವಿಗೆ.