Friday, April 25, 2008

11. ಕಾಡ ಮೂಲಕವೆ ಪಥ ಆಗಸಕ್ಕೆ

ಸುಳ್ಳಕ್ಕೆ ಕಾಲಿಡುವ ಹೊತ್ತಿಗಾಗಲೇ ಗಂಟೆ ನಾಲ್ಕು. ಹಾದಿಬದಿಯ ರಬ್ಬರ್ ಗಿಡಗಳು ಸೊಂಟಕ್ಕೆ ರಬ್ಬರ್ ಸಂಚಿಕಟ್ಟಿಕೊಂಡು ನಿಂತಿದ್ದವು. ಮರಗಳು ಎಲೆಯುದುರಿಸಿಕೊಂಡು ಬೋಳುಬೋಳಾಗಿದ್ದವು. ಅದೇ ಹಾದಿಯಲ್ಲಿ ಅಲೆದಾಡಿದ್ದು, ನಡೆದು ನಡೆದು ಸುಳ್ಯದಿಂದ ಸಂಪಾಜೆ ಘಾಟಿ ಹತ್ತಿ ಮಡಿಕೇರಿಗೆ ಬಂದದ್ದು ನೆನಪಾಯಿತು. ಹಿಂದಿನ ಸಾರಿ ಬಂದಾಗ ಜೊತೆಗೆ ಯಾಮಿನಿ ಇರಲಿಲ್ಲ, ಸುಚಿತ್ರಾ ನಾಯಕ್ ಇದ್ದಳು. ನೀವು ಯಾವಾಗಲೂ ಡ್ರೈವರ್ ಜೊತೆಗೇ ಪಯಣಿಸುತ್ತೀರಲ್ಲ. ನೀವು ಡ್ರೈವ್ ಮಾಡೋದಿಲ್ಲವಾ ಅಂತ ಕೇಳಿದ್ದಳು. ಒಂದು ಕಾಲದಲ್ಲಿ ತಾನು ಹೇಗೆ ಸಾವಿರಾರು ಕಿಲೋಮೀಟರ್ ಒಬ್ಬನೇ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದೆ ಅನ್ನುವುದನ್ನು ಹೇಳಬೇಕು ಅಂತ ಹೊರಟ ಚಿರಾಯುವಿಗೆ ಇದ್ದಕ್ಕಿದ್ದಂತೆ ಬೇಸರ ಉಕ್ಕಿಬಂತು.
ಹಳೆಯ ಪರಾಕುಗಳಲ್ಲಿ ಬದುಕುವುದೆಂದರೆ ಅವನಿಗೆ ಅಸಹ್ಯ. ಆವತ್ತು ಹಾಗಿದ್ದೆ, ನನ್ನ ಯೌವನದಲ್ಲಿ ಹುಲಿಬೇಟೆ ಆಡಿದ್ದೆ, ಒಂದು ಕಾಲದಲ್ಲಿ ಹಾಗೆ ಮಾಡುತ್ತಿದ್ದೆ ಅಂತ ಹೇಳಿಕೊಳ್ಳುವುದು ಸದ್ಯದ ಅಸಹಾಯಕತೆಯನ್ನು ತೋರಿಸುತ್ತದೆ. ವರ್ತಮಾನದಲ್ಲಿ ನಿರ್ಬಲವನೂ ನಿಷ್ಕ್ರಿಯನೂ ಆದ ಮನುಷ್ಯ, ಭೂತಕಾಲಕ್ಕೆ ಕನ್ನಡಿ ಹಿಡಿಯುವ ಮೂಲಕ ತನ್ನ ಶಕ್ತಿ, ಸೃಜನಶೀಲತೆ ಮತ್ತು ಸಾಮರ್ಥ್ಯವನ್ನು ಊರ್ಜಿತಗೊಳಿಸುವ ರೀತಿ ಅವನನ್ನು ತಲ್ಲಣಗೊಳಿಸುತ್ತಿತ್ತು. ಮೊದಲ ಕಾದಂಬರಿಯ ಕುರಿತೇ, ಹದಿನಾರನೆಯ ಕಾದಂಬರಿ ಬರೆದ ಸಂದರ್ಭದಲ್ಲೂ ಮಾತಾಡುವುದು ಅನವಶ್ಯಕ ಎಂದೇ ಚಿರಾಯು ವಾದಿಸುತ್ತಿದ್ದ.
ಸುಚಿತ್ರಾ ನಾಯಕ್ ಹಾಗೆ ಕೇಳಿದ್ದೇಕೆ ಅನ್ನುವುದು ಮಾತ್ರ ಅವನಿಗೆ ಹೊಳೆಯಲಿಲ್ಲ. ತಾವಿಬ್ಬರೇ ಇದ್ದರೆ ಚೆನ್ನಾಗಿತ್ತು ಎಂದು ಅವಳಿಗೆ ಅನ್ನಿಸಿತ್ತೋ ಏನೋ? ಸಾಮಾನ್ಯವಾಗಿ ತನ್ನ ಸಂಪರ್ಕಕ್ಕೆ ಬಂದ ಹೆಣ್ಣುಮಕ್ಕಳ ವ್ಯಕ್ತಿತ್ವವನ್ನು ನಿಷ್ಕರ್ಷೆ ಮಾಡುವುದಕ್ಕೆ ಹೋಗುತ್ತಿರಲಿಲ್ಲ ಚಿರಾಯು. ಅವರ ನಿಲುವೇನು, ಇರಾದೆಯೇನು, ಮನಸ್ಥಿತಿಯೇನು, ಉದ್ದೇಶ ಏನು ಅನ್ನುವುದನ್ನೆಲ್ಲ ಲೆಕ್ಕ ಹಾಕುವುದೆಂದರೆ ಅವನಿಗೆ ಪರಮ ಅಸಹ್ಯ. ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ. ಅವರನ್ನು ಹಾಗ್ಹಾಗೇ ಸ್ವೀಕರಿಸಬೇಕು ಎನ್ನುತ್ತಿದ್ದ ಚಿರಾಯುವನ್ನು ಅಖಂಡವಾಗಿ ಖಂಡಿಸುತ್ತಿದ್ದವಳು ಯಾಮಿನಿ. ನಿಂಗೆ ಗೊತ್ತಾಗಲ್ಲ ಚಿರಾಯು. ಅವರೆಲ್ಲರೂ ನಿನ್ನನ್ನು ಬಳಸ್ಕೋತಿದ್ದಾರೆ. ನಿನ್ನ ಅಧಿಕಾರ, ಪವರ್, ಇಮೇಜು, ಪ್ರಭಾವಳಿಗಳಷ್ಟೇ ಅವರಿಗೆ ಬೇಕಾಗಿರೋದು. ನಿನ್ನ ಮೇಲಿನ ಪ್ರೀತಿಯಿಂದ ಅವರು ನಿನಗೆ ಹತ್ತಿರಾಗ್ತಿಲ್ಲ. ಸಿನಿಮಾ ನಟಿಯರು ರಾಜಕಾರಣಿಗಳ ಹತ್ತಿರ ಯಾಕೆ ಹೋಗ್ತಾರೆ ಅಂತೀಯ? ಅಲ್ಲಿ ಅವರಿಗೆ ಏನು ಸಿಗುತ್ತೆ ಅಂದ್ಕೊಂಡಿದ್ದೀಯಾ? ಅವರ ಯೌವನವನ್ನು ತಣಿಸುವಂಥ ಸುಖ ಸಿಗೋಲ್ಲ. ಆದರೆ ಅವರಿಗೆ ಆ ಸುಖ ಬೇಕಾಗಿರೋಲ್ಲ, ಬೇಕಾಗೋದು ಪವರ್‌ಗೆ ಹತ್ತಿರವಿದ್ದೇನೆ ಅನ್ನುವ ತೃಪ್ತಿ ಎಂದು ಅವಳು ಪದೇ ಪದೇ ಹೇಳುತ್ತಿದ್ದಳು. ಅವಳು ಹಾಗೆ ಹೇಳುತ್ತಿದ್ದದ್ದು ತನ್ನನ್ನು ಆ ಹೆಣ್ಣುಮಕ್ಕಳಿಂದ ದೂರ ಇಡುವುದಕ್ಕೇನೋ ಅಂತಲೂ ಅವನಿಗೆ ಅನೇಕ ಸಲ ಅನ್ನಿಸಿದೆ. ಆದರೆ ಯಾಮಿನಿ ಹೇಳಿದ್ದರಲ್ಲೂ ಸತ್ಯವಿದೆ ಅನ್ನುವುದು ಅವನಿಗೆ ಗೊತ್ತಾಗಿದ್ದು ಸುಚಿತ್ರಾ ನಾಯಕ್ ಪರಿಚಯ ಆದಾಗಿನಿಂದ.
ಸುಚಿತ್ರಾ ಅವನನ್ನು ಕಡಿಮೆ ಕಾಡಲಿಲ್ಲ. ಅವನನ್ನು ತನ್ನ ಮಾತಿನಿಂದ, ಜ್ಞಾನದಿಂದ, ವಿವೇಕದಿಂದ, ಬುದ್ಧಿವಂತಿಕೆಯಿಂದ ಸ್ಪರ್ಶಿಸುವುದು, ತಾಕುವುದು ಮತ್ತು ಒಳಗೊಳ್ಳುವುದು ಅಸಾಧ್ಯ ಅಂತ ಅರ್ಥವಾದ ತಕ್ಷಣ ತನ್ನ ವರಸೆ ಬದಲಾಯಿಸಿಕೊಂಡು ಬಿಟ್ಟಳು. ಅವಳು ಆಡಿದ ಅಷ್ಟೂ ಮಾತುಗಳನ್ನು ಚಿರಾಯು ಬೇಸರದಿಂದ, ಆಕಳಿಸುತ್ತಾ ಕೇಳಿಸಿಕೊಂಡ. ಅದರಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ತನಗೂ ಅವಳಿಗೂ ಸಮಾನವಾದ ವಿಚಾರ ಯಾವುದೂ ಇಲ್ಲ ಅನ್ನುವುದು ಎರಡನೆಯ ಭೇಟಿಯಲ್ಲೇ ಅವನಿಗೆ ಖಚಿತವಾಯಿತು.
ಇನ್ನೇನು ಅವನು ತನ್ನಲ್ಲಿ ಆಸಕ್ತಿ ಕಳಕೊಳ್ಳುತ್ತಾನೆ ಅಂತ ಗೊತ್ತಾಗುತ್ತಿದ್ದಂತೆ ಸುಚಿತ್ರಾ ಅವನನ್ನು ಬಿಗಿಯಾಗಿ ತಬ್ಬಿಕೊಂಡು ಬಿಟ್ಟಿದ್ದಳು. ಚಿರಾಯು ಕೂಡ ಬೇಸರದ ಆ ಗಳಿಗೆಯಲ್ಲಿ ಅದೊಂದೇ ಬಿಡುಗಡೆಯೇನೋ ಅಂದುಕೊಂಡು ತಾನೂ ಅವಳನ್ನು ಅಷ್ಟೇ ಬಿಗಿಯಾಗಿ ತಬ್ಬಿಕೊಂಡಿದ್ದ. ಅವಳನ್ನು ಅವನು ಚುಂಬಿಸುವ ಹೊತ್ತಿಗೆ ಅವಳ ಕಣ್ಣಲ್ಲಿ ಗೆದ್ದ ಭಾವವಿತ್ತು ಅನ್ನುವುದು ಆಮೇಲೊಂದು ದಿನ ಚಿರಾಯುವಿಗೆ ನೆನಪಾಗಿತ್ತು.
ಈ ದೇಹವೂ ಅದಕ್ಕೊಂದು ಮೂಲಪ್ರವೃತ್ತಿಯೂ ಇಲ್ಲದೇ ಹೋಗಿದ್ದರೆ ಕೆಲವರ ಜೊತೆ ಸಂವಹನ ಸಾಧ್ಯವೇ ಆಗುತ್ತಿರಲಿಲ್ಲವಲ್ಲ ಎಂದು ಯೋಚಿಸುತ್ತಾ ಚಿರಾಯು ಬೆರಗಾಗುತ್ತಿದ್ದ. ಮಾತು, ಕಲೆ, ಸೃಜನಶೀಲತೆ ಇವೆಲ್ಲವನ್ನೂ ಮೀರಿದ್ದು ಬೇಸಿಕ್ ಇನ್‌ಸ್ಟಿಂಕ್ಟ್. ಇಬ್ಬರನ್ನು ಹತ್ತಿರಾಗಿಸುವುದು ಅದೇ. ಉಳಿದದ್ದೆಲ್ಲ ಪ್ರೇಮಿಸದೇ ಇರುವಾಗಿನ ಕಾಲವನ್ನು ಕೊಲ್ಲುವುದಕ್ಕಿರುವಂಥ ಚಿತಾವಣೆಗಳು. ಅವುಗಳಿಂದ ಸಂಬಂಧ ಬಲವಾಗುವುದು ಸಾಧ್ಯೇ ಇಲ್ಲ. ಅವನನ್ನು ಅವಳು, ಅವಳನ್ನು ಅವನು ಇಡಿಯಾಗಿ ಸ್ವೀಕರಿಸಬೇಕಿದ್ದರೆ ಇಬ್ಬರೂ ದೈಹಿಕವಾಗಿ ಒಂದಾಗಬೇಕು. ಸಂಭೋಗದಲ್ಲಿ, ಪರಸ್ಪರರ ಹುಡುಕಾಟದಲ್ಲಿ, ಇಬ್ಬರೂ ನಿಮಗ್ನರಾಗಿ ನಗ್ನರಾಗಿ ಕಂಡುಕೊಂಡಾಗಷ್ಟೇ ಪ್ರೀತಿ ನೆಲೆಯಾಗುತ್ತದೆ ಅಂತ ತುಂಬ ಕಾಲ ನಂಬಿದ್ದ ಚಿರಾಯುವಿನ ವಾದವನ್ನು ಒಂದೇ ಮಾತಿನಿಂದ ತಳ್ಳಿಹಾಕಿದವಳು ಯಾಮಿನಿ.
ಹಾಗಿದ್ದರೆ ನಿನ್ನನ್ನು ಸ್ಮಿತಾ ಬಿಟ್ಟುಹೋದದ್ದೇಕೆ ಹೇಳು’ ಎಂದು ಥಟ್ಟನೆ ಕೇಳಿದ್ದಳು ಯಾಮಿನಿ. ಅವಳ ಜೊತೆ ಅದೆಲ್ಲವೂ ಸಾಧ್ಯವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಇಬ್ಬರೂ ಜೊತೆಗೆ ಬಾಳುವುದಕ್ಕೆ ಎಲ್ಲಾ ಕಾರಣಗಳೂ ಇದ್ದವು. ನೀವಿಬ್ಬರೂ ಸಂಪ್ರದಾಯಬದ್ಧವಾಗಿ, ನಿನಗದು ಇಷ್ಟವಿಲ್ಲದೇ ಇದ್ದರೂ ಮದುವೆ ಆಗಿದ್ದಿರಿ. ಹೇಗೋ ಹೊಂದಿಕೊಂಡು ಹೋಗಬಹುದಿತ್ತು. ನೀನು ಹೇಳುವ ಹಾಗೆ ದೈಹಿಕವಾಗಿ ಏನೇನಾಗಬೇಕೋ ಅದೆಲ್ಲವೂ ಆಗಿಹೋಗಿತ್ತು. ಆ ಸಂಭೋಗ, ಸಮಾಗಮ ಮತ್ತ್ಯಾಕೆ ನಿಮ್ಮನ್ನು ಹತ್ತಿರಾಗಿಸಲಿಲ್ಲ ಹೇಳು. ನೋಡೋ, ಅದೆಲ್ಲ ಸುಳ್ಳು,. ಜೊತೆಗಿದ್ದಾಗ ಜೊತೆಗಿರುತ್ತೇವೆ ಅಷ್ಟೇ. ದೂರವಾದಾಗ ದೂರ ಆಗುತ್ತೇವೆ ಅಷ್ಟೇ. ಅದಕ್ಕೆ ಯಾವ ಕಾರಣಗಳೂ ಇರುವುದಿಲ್ಲ’
ಯಾಮಿನಿ ಒಮ್ಮೊಮ್ಮೆ ಹಾಗೆ ಮಾತಾಡುತ್ತಾಳೆ. ಅವಳು ಅದನ್ನು ಅರಿತು ಆಡುತ್ತಾಳೋ, ತಿಳಿದು ಆಡುತ್ತಾಳೋ ಓದಿ ಆಡುತ್ತಾಳೋ ಅನ್ನುವ ಕುತೂಹಲ ಚಿರಾಯುವಿನಲ್ಲಿ ಇನ್ನೂ ಉಳಿದುಕೊಂಡಿದೆ. ಎಷ್ಟೋ ಸಾರಿ ಆಕೆ ಮಾತಿನ ಭರದಲ್ಲಿ ಪರಮ ಸತ್ಯಗಳನ್ನು ಹೇಳಿಬಿಡುತ್ತಾಳೆ.
ದೇಹವಿಲ್ಲದೇ ಪ್ರೀತಿಸಬೇಕು ಅನ್ನೋದು ತಮ್ಮ ದೌರ್ಬಲ್ಯ ಗೊತ್ತಿರುವ ಗಂಡಸರು ಹೂಡಿದ ಮೊಂಡು ವಾದ. ಪ್ರೀತಿಯಲ್ಲಿ ದೈಹಿಕ, ಮಾನಸಿಕ, ದೈವಿಕ ಅಂತೆಲ್ಲ ಇಲ್ಲ. ಹಾಗೆ ಭಾಗ ಮಾಡಿ ನೋಡುವುದೂ ತಪ್ಪು. ಸುಮ್ಮನೆ ಅನ್ನಿಸಿದ ಹಾಗೆ ಬದುಕಿದರೆ, ಈ ಯಾವ ರಗಳೆಗಳೂ ಇರೋದಿಲ್ಲ ಅಂದಿದ್ದಳು ಯಾಮಿನಿ.
ಅಕ್ಕಮಹಾದೇವಿ ದೇಹವಿಲ್ಲದ ಮಲ್ಲಿಕಾರ್ಜುನನ್ನು ಪ್ರೀತಿಸಿದ್ದಳಲ್ಲ, ಮೀರಾ ಗಿರಧರನನ್ನು ದೇಹದ ಹಂಗಿಲ್ಲದೆ ಪ್ರೀತಿಸಿರಲಿಲ್ಲವಾ ಕೇಳಿದ್ದ ಚಿರಾಯು. ಯಾಮಿನಿ ಬೇಸರದಲ್ಲೇ ಹೇಳಿದ್ದಳು: ಚೆನ್ನಮಲ್ಲಿಕಾರ್ಜುನನಿಗೋ ಗಿರಿಧರನಿಗೋ ದೇಹ ಇರಲಿಲ್ಲ ಅಂತ ಹೇಳಿದವರು ಯಾರು? ಅಕ್ಕನ ಕಲ್ಪನೆಯಲ್ಲಿ. ಮೀರಾಳ ಮನಸ್ಸಿನಲ್ಲಿ ಅವರ ಪ್ರೇಮಿಗೊಂದು ದೇಹ ಇದ್ದಿರಲೇ ಬೇಕಲ್ಲ. ಭೌತಿಕವಾದ ದೇಹ ಇದ್ದರೂ ಅದನ್ನು ಎಷ್ಟು ಹುಡುಗಿಯರು ಪ್ರೀತಿಸುತ್ತಾರೆ ಹೇಳು. ಆ ಹೊತ್ತಿಗೆ ಅವರ ಕಲ್ಪನೆಯಲ್ಲಿ ಮತ್ತೊಂದು ದೇಹ, ಮತ್ತೊಂದು ಮನಸ್ಸು ಸೃಷ್ಟಿಯಾಗಿರುತ್ತದೆ. ಸುಚಿತ್ರಾ ತಬ್ಬಿಕೊಂಡದ್ದು ನಿನ್ನ ಈ ಮೂಳೆ ಮಾಂಸದ ತಡಿಕೆಯನ್ನಲ್ಲ. ನಿನ್ನ ಖ್ಯಾತಿ, ಪ್ರತಿಭೆ, ಸಂಪತ್ತು, ಜನಪ್ರಿಯತೆಗಳಿಂದ ತುಂಬಿಕೊಂಡ ನಿನ್ನ ದೇಹವನ್ನು. ಅದು ನಿನ್ನದಲ್ಲ.’
ಯೋಚಿಸುತ್ತಾ ಸ್ಮಿತಾಳ ನೆನಪಾಗಿದ್ದಕ್ಕೆ ಮನಸ್ಸಿಗೆ ಕಿರಿಕಿರಿ ಅನ್ನಿಸಿತು. ಅವಳು ನೆನಪಾದರೆ ತುಂಬ ಹೊತ್ತು ಏನೂ ಮಾಡಲಾಗುವುದಿಲ್ಲ ಚಿರಾಯುವಿಗೆ. ಜೊತೆಗಿದ್ದಾಗಲೂ ಕಾಡಿದಳು, ಬಿಟ್ಟೂ ಕಾಡುತ್ತಿದ್ದಾಳೆ ಅಂತ ಚಿರಾಯು
ಕಣ್ಮುಚ್ಚಿಕೊಂಡ.