Wednesday, April 23, 2008

6.ಅದರಂತರಾಳದಲಿ ಗುಪ್ತಗಾಮಿನಿಯಾಗಿ..

ಕತೆಗಾರ ಮುಗ್ಧನಾಗಿರಬೇಕು. ಅಜ್ಞಾನಿಯಾಗಿರಬೇಕು. ತರ್ಕಬದ್ಧವಾಗಿ ಯೋಚಿಸಬಲ್ಲ ಸಾಮರ್ಥ್ಯ ಅವನಿಗೆ ಇರಕೂಡದು. ಹುಂಬನೂ ತನಗೆ ಅನ್ನಿಸಿದ್ದನ್ನು ಬರೆಯಬಲ್ಲವನೂ ಆಗಿರಬೇಕು.
ಹೀಗೆ ತನ್ನ ಯೋಚನೆಗಳನ್ನು ತಿದ್ದುತ್ತಾ ಹೋದ ಚಿರಾಯು. ಕೊನೆಗೆ ಆ ಅಸ್ಪಷ್ಟ ಯೋಚನೆಗೊಂದು ನೆಲೆ ಸಿಕ್ಕಿತು. ಲೇಖಕ less informed ಆಗಿರಬೇಕು. ಮಾಹಿತಿಗಳು ಹೆಚ್ಚಾಗುತ್ತಾ ಹೋದ ಹಾಗೆ ಕ್ರಿಯೇಟಿವಿಟಿ ಕಡಿಮೆಯಾಗುತ್ತಾ ಹೋಗುತ್ತದೆ. ತಾನುಂಟೋ ಮೂರು ಲೋಕವುಂಟೋ ಎಂಬಂತೆ ಬರೆಯಬೇಕು. ತನಗಿಂತ ಚೆನ್ನಾಗಿ, ತನಗಿಂತ ಪ್ರಭಾವಶಾಲಿಯಾಗಿ, ಜನಗಿಂತ ಪ್ರಚಾರ ಪಡೆಯಬಲ್ಲಂತೆ ಬರೆಯುವ ಮಾರ್ಕೆಸ್, ಅರುಂಧತಿ ರಾಯ್, ಗಿರೀಶ್ ಕಾರ್ನಾಡ್, ಉಪಮನ್ಯು ಚಟರ್ಜಿ ಮುಂತಾದವರ ನಡುವೆಯೇ ತಾನು ಬರೆಯಬೇಕು. ಅಷ್ಟು ಸಾಲದೆಂಬಂತೆ ಷೇಕ್ಸ್‌ಪಿಯರ್, ಕಾಳಿದಾಸ, ಕಮೂ, ಸಾರ್ತ್, ಎಲಿಯಟ್, ಮಾರ್ಕ್ ಟ್ವೈನ್ ಮುಂತಾದ ಅಸಂಖ್ಯ ಲೇಖಕರಿದ್ದಾರೆ. ಹೀಗೆ ಕನ್ನಡದ ಒಂದು ಹಳ್ಳಿಯಲ್ಲಿ ಕುಳಿತು ಬರೆಯುತ್ತಿರುವ ಹೊತ್ತಿಗೆ ತಾನೊಂದು ಕ್ಷುದ್ರ ಜೀವಿ ಅನ್ನಿಸಿಬಿಟ್ಟರೆ ಏನನ್ನೂ ಸೃಷ್ಟಿಸಲಾರೆ ತಾನು. ತಾನು ಕೂಡ ಅವರೆಲ್ಲರಿಗೆ ಸರಿಸಮನಾದ ಲೇಖಕ. ಅವರೆಲ್ಲರನ್ನೂ ಮೀರಿಸುವಂತೆ ಬರೆದುಬಿಡಬಲ್ಲೆ. ನನಗೆ ಅನ್ನಿಸುತ್ತಿರುವುದು ನನಗಷ್ಟೇ ಅನ್ನಿಸೋದಕ್ಕೆ ಸಾಧ್ಯ. ಆ ವಿಶಿಷ್ಟ ಗ್ರಹಿಕೆ ಇನ್ನಾರಲ್ಲೂ ಇರುವುದಕ್ಕೆ ಸಾಧ್ಯವಿಲ್ಲ. ಕನ್ನಡದ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ನಾನು ಯೋಚಿಸುತ್ತಿದ್ದೇನೆ ಎಂಬ ಅಹಂಕಾರದಲ್ಲೇ ನಾನು ಬರೆಯಬೇಕು.
ಹೀಗೆ ಚಿರಾಯು ಯೋಚಿಸಿದ್ದು ಅದು ಮೊದಲೇನಲ್ಲ. ಆದರೆ, ಬರೆಯಲು ಕುಳಿತಾಕ್ಷಣ ಅವನ ಅಹಂಕಾರವೆಲ್ಲ ಕರಗಿ ಹೋಗಿ ತಾನೊಬ್ಬ ವಿನಯವಂತ ಕತೆಗಾರ ಆಗಿಬಿಡುತ್ತೇನೆ ಅಂತ ಅವನಿಗೆ ಸಂತೋಷವಾಗುತ್ತದೆ. ಆ ವಿನಯವಂತಿಕೆಯೂ ಸುಳ್ಳೇ. ಕತೆಗಾರ ವಿನಯವಂತ ಯಾಕಾಗಿರಬೇಕು. ಅವನ ವಿನಯದಿಂದಲಾಗಲೀ ಅವನ ಅಹಂಕಾರದಿಂದಾಗಲೀ ಒಂದು ಕೃತಿ ಶ್ರೇಷ್ಠವಾಗುವುದಿಲ್ಲ. ವಿನಯವಂತವೆಂಬ ಕಾರಣಕ್ಕೆ ಅದು ಓದಿಸಿಕೊಳ್ಳುವುದಿಲ್ಲ. ಆದರೆ ವಿನಯವೊಂದು ಗುಣವಾಗಿ ತನ್ನಲ್ಲಿ ಉಳಿದುಬಿಡಬಹುದಲ್ಲ.
ಅಷ್ಟಕ್ಕೂ ಅತ್ಯಂತ ಪ್ರಾಮಾಣಿಕವಾಗಿ ಬರೆಯುವುದು ಹೇಗೆ? ಹಾಗೆ ಬರೆಯುವುದಕ್ಕೆ ಅದು ತನ್ನ ಕತೆಯೇ ಆಗಿರಬೇಕಾ? ಅತ್ಯಂತ ಪ್ರಾಮಾಣಿಕ ಕೃತಿ ಎಂದು ಮೆಚ್ಚುಗೆ ಪಡೆದಿದ್ದ ತನ್ನ ಕಾದಂಬರಿ ಮಹಾಪ್ರಸ್ಥಾನ’ದಲ್ಲಿ ಬರುವ ಸುಶೀಲೆಗೂ ತಾನು ಕಂಡ ಸರಸ್ವತಿಗೂ ಎಷ್ಟೊಂದು ವ್ಯತ್ಯಾಸಗಳಿದ್ದವು. ಸರಸ್ವತಿ ಅಷ್ಟೆಲ್ಲ ತೀವ್ರವಾಗಿ ಬದುಕಿದವಳೇ ಅಲ್ಲ. ಆದರೆ ಕಾದಂಬರಿಯಲ್ಲಿ ಸುಶೀಲೆಯಾಗಿ ಸರಸ್ವತಿಗೊಂದು ಮರುಹುಟ್ಟು ಕೊಟ್ಟೆ. ಅವಳನ್ನು ಯಾವುದನ್ನೂ ಒಪ್ಪಿಕೊಳ್ಳದ, ಯಾವುದಕ್ಕೂ ಪ್ರತಿಕ್ರಿಯಿಸದ, ಯಾರನ್ನೂ ಅಷ್ಟು ಸುಲಭವಾಗಿ ತನ್ನೊಳಗೆ ಕರೆದುಕೊಳ್ಳದ ಹೆಣ್ಣಾಗಿ ಚಿತ್ರಿಸಿದ್ದೇ ಆ ಪಾತ್ರಕ್ಕೊಂದು ಘನತೆ ಬಂದುಬಿಟ್ಟಿತು. ತನ್ನನ್ನು ಮಹಿಳಾ ಸಂವೇದನೆಯನ್ನು ಗುರುತಿಸಬಲ್ಲ ಆರ್ದ್ರ ಮನಸ್ಸಿನ ಲೇಖಕ ಎಂದು ಕರೆಯುವಂತೆ ಮಾಡಿದ್ದೂ ಅದೇ ಪಾತ್ರವಲ್ಲವೇ?
ಆದರೆ, ಅದು ಸರಸ್ವತಿಗೆ ಇಷ್ಟವಾಗಿತ್ತಾ? ಅವಳದನ್ನು ಓದಿರಲಿಲ್ಲ. ಓದಿದ ಅವಳ ಮಾವ ಅವಳಿಗೆ ಹೇಳಿದ್ದರು. ಮಹಾಪ್ರಸ್ಥಾನದ ಸುಶೀಲೆಯ ಹಾಗೆ ಬದುಕಬೇಕು ಅನ್ನುವುದು ಆ ಕಾದಂಬರಿ ಓದಿದ ಹಲವರ ಆಸೆಯೂ ಆಗಿತ್ತು.
ಆದರೆ ಸುಶೀಲೆಯ ಕತೆಯನ್ನು ದುರಂತದಲ್ಲಿ ಮುಗಿಸಿದ್ದು ಯಾಕೆ? ತನ್ನ ಗಂಡನ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳುವುದಕ್ಕೆ ಅವಳು ಮಾವನಿಗೆ ತನ್ನನ್ನು ಒಪ್ಪಿಸಿಕೊಂಡಳಾ? ಅಥವಾ ತಾನೊಬ್ಬ ಮಹಾನ್ ಪಂಡಿತ, ತತ್ವಜ್ಞಾನಿ, ವೇದಾಂತಿ, ಎಲ್ಲವನ್ನೂ ಮೀರಿದ ಸನ್ಯಾಸಿ ಅನ್ನುವ ಅವರ ನಂಬಿಕೆಯನ್ನು ಸುಳ್ಳು ಮಾಡುವುದಕ್ಕಾ? ನನ್ನ ಸೌಂದರ್ಯದ ಮುಂದೆ ನಿನ್ನ ನಂಬಿಕೆ, ಆಚರಣೆ, ನಿರ್ಧಾರ, ತಪಸ್ಸು ಎಲ್ಲವೂ ಸುಳ್ಳು. ಈ ಕ್ಷಣದ ಮರ್ದನ ಮಾತ್ರ ಸತ್ಯ ಎಂದು ತೋರಿಸಿಕೊಡುವುದಕ್ಕಾ?
ಚಿರಾಯು ಕಾದಂಬರಿಯಲ್ಲಿ ಆ ಸಾಲುಗಳಿದ್ದವು:
ನಾನು ಬೋರ್ಗರೆಯುವ ನದಿ. ನೀನು ನದಿಯನ್ನು ದಾಟದೇ ಆಚೆ ದಡ ಸೇರಲಾರೆ. ದಡ ಸೇರುತ್ತೇನೆ, ಹೊಸ ನೆಲಕ್ಕೆ ಕಾಲಿಡುತ್ತೇನೆ ಎಂದು ನೀನು ಅಂದುಕೊಂಡಿದ್ದರೆ ನನ್ನನ್ನು ದಾಟಿಯೇ ಸಾಗಬೇಕು. ಬುದ್ಧಿವಂತರು ದೋಣಿಯಲ್ಲಿ ದಾಟುತ್ತಾರೆ, ಸಾವಿನ ಭಯ ಅವರನ್ನೂ ಬಿಟ್ಟಿರುವುದಿಲ್ಲ. ಧೀರರು ಈಜಿಕೊಂಡು ದಾಟುತ್ತಾರೆ. ಅವರಲ್ಲಿ ಸಾವಿನ ಭಯ ಇರುವುದಿಲ್ಲ. ಕೆಲವರು, ನದಿ ಒಣಗಿ ಮೊಣಕಾಲುದ್ದ ನೀರಿದ್ದಾಗ ದಾಟುತ್ತಾರೆ. ಅಂಥವರ ಬಗ್ಗೆ ನನಗೆ ಆಸಕ್ತಿಯಿಲ್ಲ. ನೀರಿನ ಆಕರ್ಷಣೆಯ ಬಗ್ಗೆ ನಿನಗೆ ಗೊತ್ತಿಲ್ಲ ಮನು. ಅದು ಚಕ್ರಸುಳಿಯಾಗಿ ಸೆಳೆಯುತ್ತದೆ. ನೋಡುತ್ತಿದ್ದಂತೆ ಬಳಿಗೆ ಕರೆಯುತ್ತದೆ. ಆ ಮೋಹದಿಂದ ತಪ್ಪಿಸಿಕೊಂಡವರು ಗೆದ್ದೆ ಅಂದುಕೊಂಡಿರುತ್ತಾರೆ, ಸೋತಿರುತ್ತಾರೆ.
ತನ್ನ ಅದುವರೆಗಿನ ಬದುಕನ್ನು ನಿರರ್ಥಕ ಅನ್ನಿಸುವಂತೆ ಬರೆದಿದ್ದ ಸಾಲುಗಳನ್ನು ಸುಶೀಲೆಯ ಮಾವ ಓದಿ ಸಿಟ್ಟಾಗಿದ್ದರು ಅಂತ ಕೇಳಿದ್ದ. ಕಾದಂಬರಿ ಓದಿದ ಬೇರೆ ಯಾರಿಗೂ ಅದು ಸರಸ್ವತಿ ಅಂತ ಗೊತ್ತಾಗುವುದು ಸಾಧ್ಯವೇ ಇರಲಿಲ್ಲ. ಆದರೆ ಸರಸ್ವತಿಯ ಮಾವನಿಗೆ ಗೊತ್ತಾಗಿತ್ತು. ತನ್ನ ರಹಸ್ಯಗಳನ್ನು ಈತ ಒಂದೊಂದಾಗಿ ಬಗೆಯುತ್ತಾ ಹೋಗುತ್ತಾನೆ ಎಂದು ಅವರಿಗೆ ಭಯವಾಗಿತ್ತೇನೋ?
ಆಗಲೇ ತಾನೊಬ್ಬ ಶ್ರೇಷ್ಠ ದಾರ್ಶನಿಕ ಅನ್ನಿಸಿತ್ತು ಚಿರಾಯುವಿಗೆ. ತಾನು ಬರೆದದ್ದರಲ್ಲಿ ಸತ್ಯವೂ ಇರಬಹುದು ಅನ್ನಿಸಿದ್ದು. ಇನ್ನೊಬ್ಬರನ್ನು ನೋಡುತ್ತಾ ಅವರು ಹೀಗೇ ಬದುಕುತ್ತಿದ್ದಾರೆ, ಅವರ ಮನಸ್ಸಿನಲ್ಲಿ ಇಂಥದ್ದೇ ಯೋಚನೆ ಇದೆ, ಅವರು ಇದೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಚಿರಾಯು ತನ್ನಲ್ಲೇ ಅಂದುಕೊಳ್ಳುತ್ತಿದ್ದ.
ಹೀಗೆ ಮತ್ತೊಬ್ಬರ ಬದುಕನ್ನು ತನ್ನೊಳಗೇ ಜೀವಿಸುತ್ತಾ ಮತ್ತೊಬ್ಬರ ಆತ್ಮಚರಿತ್ರೆಯ ಭಾಗವಾಗುತ್ತಾ, ತನ್ನ ಚಿಂತನೆಗಳಲ್ಲಿ ತನ್ನದೆಷ್ಟು ಮತ್ತೊಬ್ಬರದೆಷ್ಟು ಅನ್ನುವುದು ತಿಳಿಯದ ಹಾಗೆ ಬದುಕಿದ್ದರಿಂದ ತಾನು ಕಳೆದುಕೊಂಡದ್ದೆಷ್ಟು ಎಂದು ಯೋಚಿಸುತ್ತಾ ಚಿರಾಯು ಎದ್ದು ನಿಂತ.
ಒಳಗೆ ಫೋನು ಅರಚಿಕೊಳ್ಳುತ್ತಿತ್ತು. ಹೋಗಿ ನೋಡಿದರೆ ಊರ್ಮಿಳೆ.
ಆ ಫೋನನ್ನು ನಿರಾಕರಿಸುವುದು ಕೂಡ ತನ್ನನ್ನು ಗಟ್ಟಿಯಾಗಿಸಿಕೊಳ್ಳುವ ವಿಧಾನ ಎಂಬಂತೆ ಚಿರಾಯು ಹೊರಗೆ ಬಂದ. ಎಷ್ಟೋ ಹೊತ್ತಿನ ನಂತರ ಅವನು ಫೋನಿನ ಬಳಿಗೆ ಬಂದಾಗ ಇಪ್ಪತ್ತೆರಡು ಮಿಸ್ಡ್ ಕಾಲ್‌ಗಳಿವೆ ಎಂಬ ಸೂಚನೆಯಿತ್ತು.