Wednesday, April 23, 2008

5. ಒಲವು ತುಂಬುವುದಿಲ್ಲ, ತುಂಬಿದರೆ ಒಲವಲ್ಲ

ಊರ್ಮಿಳಾ ದೇಸಾಯಿಯ ಜೊತೆ ಚಿರಾಯು ಮಾತಾಡದೇ ತಿಂಗಳುಗಳೇ ಕಳೆದಿದ್ದವು. ಶಿವಮೊಗ್ಗೆಗೆ ಹೋದಾಗಗೆಲ್ಲ ಉರ್ಮಿಳಾ ಜೊತೆಗಿರುತ್ತಿದ್ದಳು. ರಮಿಸುವಂತೆ ಮಾತಾಡುತ್ತಿದ್ದಳು. ತನ್ನ ಒಂದೆರಡು ಕತೆಗಳಲ್ಲಿ ಅವಳೂ ಒಂದು ಪಾತ್ರವಾಗಿ ಬಂದಿದ್ದಾಳೆ ಅನ್ನುವ ಗುಮಾನಿ ಚಿರಾಯುವಿಗಿತ್ತು. ಆದರೆ ಅದು ಅವಳೇನಾ ಅನ್ನುವುದು ಸ್ವಷ್ಟವಾಗಿ ಅವನಿಗೂ ಗೊತ್ತಿರಲಿಲ್ಲ.
ಊರ್ಮಿಳಾ ಎಂದಿನ ಕಕ್ಕುಲಾತಿಯಲ್ಲಿ ಮಾತಾಡಿದಳು. ಅವಳ ದನಿಯಲ್ಲಿ ಪ್ರೀತಿಯಿತ್ತು. ಪ್ರೀತಿ ತೋರಿಕೆಯದೋ ನಿಜವಾದದ್ದೋ ಅಂತ ಹುಡುಕೋದಕ್ಕೆ ಹೋಗಬಾರದು ಚಿರೂ. ಹಾಗೆ ಹುಡುಕುತ್ತಾ ಹೋದಾಗಲೇ ಸಂಘರ್ಷ ಶುರುವಾಗೋದು. ನೀನು ನನ್ನನ್ನು ಮಾತ್ರ ಇಷ್ಟೊಂದು ಪ್ರೀತಿಸುತ್ತಿ ಅಂತ ನಾನಂದುಕೊಂಡಿದ್ದೀನಿ. ನನಗಿಂತ ಜಾಸ್ತಿ ನೀನು ಬೇರೆಯವರನ್ನು ಪ್ರೀತಿಸುತ್ತಲೂ ಇರಬಹುದು. ಈ ಕ್ಷಣಕ್ಕೆ, ನಮ್ಮಿಬ್ಬರ ಸಂಬಂಧಕ್ಕೆ ನನ್ನ ಅನಿಸಿಕೆಯೇ ಸಾಕು ಅಂತ ಒಂದು ರಾತ್ರಿ ಚಿರಾಯುವಿಗೆ ಹೇಳಿದ್ದಳು ಊರ್ಮಿಳಾ. ಅದನ್ನು ಚಿರಾಯು ಗಂಭೀರವಾಗಿ ಪರಿಗಣಿಸಿರಲಿಲ್ಲ.
ತಾನು ತನ್ನೂರಲ್ಲಿದ್ದೇನೆ ಅಂತ ಹೇಳಿದ ತಕ್ಷಣ ಊರ್ಮಿಳಾ ಅತ್ಯುತ್ಸಾಹದಿಂದ ಪ್ರತಿಕ್ರಿಯಿಸುತ್ತಾಳೆ ಮತ್ತು ಬಂದುಬಿಡ್ಲೇನೋ ಅಂತ ಕೇಳ್ತಾಳೆ ಎಂದುಕೊಂಡಿದ್ದ ಚಿರಾಯುವಿಗೆ ನಿರಾಸೆಯಾಯಿತು. ಚಿರಾಯು ಕರೆದಾಗಲೂ ಕೂಡ ಆಕೆ ಹೊರಡುವ ಉತ್ಸಾಹ ತೋರಲಿಲ್ಲ. ನೀನು ಬರೆಯೋದಕ್ಕೆ ಅಂತ ಹೋಗಿದ್ದೀಯ. ಅಲ್ಲಿ ಬಂದು ನಿಂಗೆ ತೊಂದರೆ ಮಾಡೋದಕ್ಕೆ ನಂಗಿಷ್ಟ ಇಲ್ಲ. ಚೆನ್ನಾಗಿ ಬರಿ, ಓದೋದಕ್ಕೆ ಕಾದಿರ್ತೀನಿ. ನಿನ್ನ ಕಾದಂಬರಿ ಓದದೇ ತುಂಬಾ ದಿನ ಆಯ್ತು ಕಣೋ ಅಂತ ಮಾತಾಡಿದ್ದರಲ್ಲೂ ಉರ್ಮಿಳಾ ದೇಸಾಯಿಯ ಆತ್ಮ ಸಿಗಲಿಲ್ಲ ಚಿರಾಯುವಿಗೆ. ಬದಲಾಗಿದ್ದು ಅವಳೋ, ತಾನೋ ಅನ್ನುವುದೂ ಗೊತ್ತಾಗಲಿಲ್ಲ. ಯಾಮಿನಿಯನ್ನು ನೋಯಿಸುವುದಕ್ಕಾದರೂ ಅವಳನ್ನು ಕರೆಸಿಕೊಳ್ಳಬೇಕು ಅನ್ನಿಸಿ ಚಿರಾಯು ಆಹ್ವಾನ ಕೊಟ್ಟ:
ಎರಡು ದಿನದ ಮಟ್ಟಿಗೆ ಬಂದು ಹೋಗು. ಜೊತೆಗೆ ಯಾರಿದ್ದರೂ ಪರವಾಗಿಲ್ಲ. ಆಮೇಲೆ ನಾನು ಚಾತುರ್ಮಾಸಕ್ಕೆ ಕೂತ್ಕೋತೇನೆ. ಕಾದಂಬರಿ ಮುಗಿಸೋ ತನಕ ಯಾರಿಗೂ ಸಿಗೋಲ್ಲ. ಈ ಕಾದಂಬರಿಗೆ ನಿನ್ನ ಸ್ಪೂರ್ತಿಯೂ ಬೇಕು ಊರ್ಮಿ.
ನೋಡ್ತೀನಿ ಕಣೋ. ಈ ಅಪರಾತ್ರಿಯಲ್ಲಿ ನಿರ್ಧಾರ ಮಾಡೋದಕ್ಕೆ ನಂಗಿಷ್ಟ ಇಲ್ಲ. ನಂಗೆ ನೆನಪಾಗೋದು ಕುದುರೆಮುಖದ ರಸ್ತೆಯಲ್ಲಿ ಕಾರು ಕೆಟ್ಟು ನಿಂತ ರಾತ್ರಿ ಎಂದು ಉರ್ಮಿಳಾ ಫೋನಿಟ್ಟಳು. ಆ ಕಾಡ ನಡುವಿನ ನಡುರಾತ್ರಿ ಚಿರಾಯುವಿನ ಕಣ್ಮುಂದೆ ಬಂತು:
ಕುದುರೆಮುಖದಲ್ಲಿ ಗಣಿಗಾರಿಕೆ ನಿಲ್ಲಿಸಬೇಕು ಅನ್ನುವ ಕೂಗು ಆರಂಭವಾಗಿದ್ದ ದಿನಗಳವು. ಅಲ್ಲೊಂದು ಪ್ರತಿಭಟನಾ ಸಭೆ ಮಾಡುವುದೆಂದು ನಿರ್ಧಾರವಾಗಿತ್ತು. ಬೆಂಗಳೂರಲ್ಲಿ ಪಾರ್ಟಿ ಮುಗಿಸಿ ಚಿರಾಯು ಹೊರಟಾಗ ಏಳೂವರೆ. ಹಾಸನ ಬಿಟ್ಟಾಗ ಹನ್ನೊಂದು. ಬೇಲೂರು ತಲುಪಿದಾಗ ಹನ್ನೆರಡು.
ದಾರಿತಪ್ಪಿತ್ತು ಬೇಲೂರಲ್ಲೋ ಮೂಡಿಗೆರೆಯಲ್ಲೋ ಅನ್ನುವುದು ಚಿರಾಯುವಿಗೆ ನೆನಪಿಲ್ಲ. ಕುದುರೆಮುಖದ ಕಡೆ ಹೋಗುವ ಬದಲು ದಾರಿತಪ್ಪಿ ಕೊಪ್ಪ ರಸ್ತೆಯಲ್ಲಿ ಕಾರು ಸಾಗಿದಂತಿತ್ತು. ಎಷ್ಟೋ ಮೈಲು ಸಾಗಿದ ನಂತರ ಸಿಕ್ಕಿದ್ದು ಜಯಪುರ, ಬಸರೀಕಟ್ಟೆ, ಮೆಣಸಿನಹಾಡ್ಯ.
ಕಾರು ಅಲ್ಲೇ ಕೆಟ್ಟು ನಿಂತದ್ದು.
ಆಗ ಚಿರಾಯುವಿಗೆ ನೆನಪಾದದ್ದು ತೇಜಸ್ವಿಯವರ ನಿಗೂಢ ಮನುಷ್ಯರು. ಅದರಲ್ಲೂ ಹೀಗೆ ರಾತ್ರಿ ಕಾರು ಕೆಟ್ಟು ನಿಲ್ಲುತ್ತದೆ. ಜಗನ್ನಾಥ ಮತ್ತು ಅವನ ಗೆಳೆಯ ಗೋಪಾಲಯ್ಯನ ಮನೆಗೆ ಹೋಗುತ್ತಾರೆ. ಗೋಪಾಲಯ್ಯನ ಮನೆಯಲ್ಲಿ ವಿಚಿತ್ರ ಅನುಭವವಾಗುತ್ತದೆ. ಉಗ್ರಗಿರಿ ನಾಗರಿಕತೆಯನ್ನು ನಾಶ ಮಾಡುವಷ್ಟು ಸಿಟ್ಟಾಗಿ ಕುಸಿಯತೊಡಗುತ್ತದೆ.
ಆ ರಾತ್ರಿ ಕಣ್ಣಿಗೆ ಕಾಣಿಸುತ್ತಿರುವ ಮೇರ್ತಿಗಿರಿ ಉಗ್ರಗಿರಿಯಂತೆ ಕಾಣಿಸಿತ್ತು ಚಿರಾಯುವಿಗೆ. ಪಕ್ಕದಲ್ಲಿ ಸುಸ್ತಾಗಿದ್ದರೂ ಜೀವಂತಿಕೆ ಚಿಮ್ಮುತ್ತಿರುವಂತೆ ಕಾಣಿಸುತ್ತಿದ್ದಳು ಊರ್ಮಿಳೆ. ಕಾರಿನ ಇಂಜಿನು ಕೆಮ್ಮಿ ಕೆಮ್ಮಿ ಕೊನೆಯುಸಿರೆಳೆಯುವ ಹೊತ್ತಿಗೆ ಆಕೆ ಚಿರಾಯುವಿನ ತೋಳಿಗೆ ಅಂಟಿಕೊಂಡಿದ್ದಳು. ಚಿರಾಯು ಅವಳ ಮುಖ ನೋಡಿದ್ದ. ಆ ಮುಖದಲ್ಲಿ ಗಾಬರಿ ಇರಲಿಲ್ಲ. ಬದಲಾಗಿ ತಾವಲ್ಲಿ ಸಿಕ್ಕಿ ಬಿದ್ದದ್ದು ದೈವೇಚ್ಛೆಯೇನೋ ಅನ್ನುವ ನೆಮ್ಮದಿ ಇತ್ತು.
ಇಲ್ಲಿಗೆ ನಾಳೆ ಬೆಳಗ್ಗೆಯ ತನಕ ಯಾವ ವಾಹನಗಳೂ ಬರುವುದಿಲ್ಲ. ಸಮೀಪದಲ್ಲಿ ಯಾವ ಹಳ್ಳಿಯಿದೆಯೋ ಗೊತ್ತಿಲ್ಲ. ಮೆಣಸಿನ ಹಾಡ್ಯ ಎನ್ನುವ ಬೋರ್ಡು ದಾಟಿ ಹದಿನಾರು ಕಿಲೋ ಮೀಟರ್ ಬಂದಿದ್ದೇವೆ. ಲೈಟ್ ಹಾಕಿಕೊಂಡೇ ಇದ್ದರೆ ನಾಳೆ ಹೊತ್ತಿಗೆ ಬ್ಯಾಟರಿ ಕೂಡ ಡೆಡ್ ಆಗುತ್ತದೆ. ಆಮೇಲೆ ಕಾರು ಸ್ಟಾರ್ಟ್ ಮಾಡುವುದು ಕಷ್ಟ. ಈ ಕತ್ತಲೆಗೆ ನೀನು ಹೆದರಿಕೊಳ್ಳುವುದಿಲ್ಲ ತಾನೇ’ ಎಂದು ಕೇಳಿದ್ದ ಚಿರಾಯು. ಅವನಿಗೆ ಹೆದರಿಕೆಯಾಗಿತ್ತು. ಸಿಟ್ಟಿಗೆದ್ದ ಒಂಟಿ ಸಲಗ ತನ್ನ ಕಾರನ್ನು ಅಪ್ಪಚ್ಚಿ ಮಾಡುತ್ತದೆ ಅನ್ನುವ ಭಯಕ್ಕಿಂತ ಹೆಚ್ಚಾಗಿ, ಕುದುರೆಮುಖ ಅರಣ್ಯವಾಸಿಗಳು ತಮ್ಮನ್ನು ಕೊಂದು ಹಾಕಿ, ತಮ್ಮಲ್ಲಿದ್ದುದನ್ನು ದೋಚಬಹುದು. ಊರ್ಮಿಳೆಯನ್ನು ಹೊತ್ತೊಯ್ಯಬಹುದು ಅನ್ನುವ ಆತಂಕವಿತ್ತು. ಅಂಥ ಯಾವ ಆತಂಕವೂ ಇಲ್ಲದವಳಂತೆ ಊರ್ಮಿಳೆ ಕಾರಿನ ಲೈಟ್ ಆರಿಸಿದ್ದಳು. ಮರುಕ್ಷಣದಲ್ಲೇ ಅವಳ ಕೈ ಚಿರಾಯುವಿನ ಆತ್ಮದ ಹುಡುಕಾಟದಲ್ಲಿತ್ತು.
ಅದು ಸಾವಿನ ಭಯವೋ ಅನ್ನುವುದು ಆ ಕ್ಷಣ ಚಿರಾಯುವಿಗೆ ಹೊಳೆದಿರಲಿಲ್ಲ. ಅಷ್ಟೇ ಅಲ್ಲ, ಅದೇನು ಅನ್ನುವುದು ಅವನಿಗೆ ಇವತ್ತಿಗೂ ಅರ್ಥವಾಗಿರಲಿಲ್ಲ. ತನ್ನ ದೇಹದ ತುಂಬ ಅಂಡಲೆದ ಊರ್ಮಿಳೆಯ ಸ್ಪರ್ಶಕ್ಕೆ ಅವನು ಸ್ಪಂದಿಸಿರಲೇ ಇಲ್ಲ. ತನಗೊಂದು ದೇಹವಿದೆ. ಅದರ ಮೂಲಭೂತ ಕರ್ತವ್ಯ ಮರುಸೃಷ್ಟಿ. ನಶ್ವರ ದೇಹ ಮತ್ತೊಂದು ಜೀವದ ಸೃಷ್ಟಿಗೆ ಕಾರಣವಾಗಬೇಕು ಎಂಬುದನ್ನು ಮರೆತಂತೆ ವರ್ತಿಸಿದ್ದು ಅವನಿಗೆ ಅಚ್ಚರಿ ತಂದಿತ್ತು. ಊರ್ಮಿಳೆ ಅವನ ಕೈಯನ್ನು ಬರಸೆಳೆದುಕೊಂಡು ತನ್ನೆದೆಗೆ ಒತ್ತಿಕೊಂಡಾಗ ಅವನಿಗೆ ನೆನಪಾದದ್ದು ಕಾಡುಕೋಣ. ಅಂಥದ್ದೇ ಕಾಡಲ್ಲಿ ಗೆಳೆಯ ಪೂವಯ್ಯನನ್ನು ತಿವಿದು ಕಾಲಲ್ಲಿ ಹೊಸಕಿಹಾಕಿದ ಕಾಡುಕೋಣ.
ಆ ರಾತ್ರಿ ನಿಷ್ಕ್ರಿಯನಂತೆ ಮಲಗಿಬಿಟ್ಟಿದ್ದ ಚಿರಾಯು. ಯಾವ ಸುಂದರಿಯೂ ತನ್ನನ್ನು ಬಡಿದೆಬ್ಬಿಸಲಾರಳು. ತನಗೆ ಸೃಷ್ಟಿಸುವ ಸುಖಿಸುವ ಸುಖಿಸಿ ಸೃಷ್ಟಿಸುವ ಸಾಮರ್ಥ್ಯ ತೀರಿಹೋಗಿದೆ ಅನ್ನಿಸಿಬಿಟ್ಟಿತ್ತು. ಊರ್ಮಿಳೆಯ ಅಂಗೈ ತನ್ನ ಕಿಂಕರ್ತವ್ಯವಿಮೂಢ ಅಂಗದನನ್ನು ಸ್ಪರ್ಶಿಸಿದಾಗಲೂ ಚಿರಾಯುವಿಗೆ ಮುಟ್ಟಿಸಿಕೊಂಡ ಭಾವ ದಕ್ಕಲಿಲ್ಲ. ತಾನು ಸೋತುಬಿಟ್ಟೆ ಅನ್ನಿಸಿರಲಿಲ್ಲ. ಅವಮಾನ ಅನ್ನಿಸಿರಲಿಲ್ಲ. ಅವಳೇನು ಅಂದುಕೊಳ್ಳುತ್ತಾಳೋ ಅನ್ನುವ ಆತಂಕ ಇರಲಿಲ್ಲ.
ಸಾವನ್ನು ಗೆದ್ದಿದ್ದನಲ್ಲವೇ ಆ ದಿನ ಅಂತ ಈ ಕ್ಷಣ ಅನ್ನಿಸಿತು. ಆವತ್ತು ಊರ್ಮಿಳೆಗೆ ಏನನ್ನಿಸಿರಬೇಕು. ಆಕೆಗೆ ತಾನು ನಿಷ್ಪ್ರಯೋಜಕಿ ಅನ್ನಿಸಿರಬಹುದೇ? ತನ್ನ ಸಾನ್ನಿಧ್ಯ ಈತನನ್ನು ಅರಳಿಸಲಾರದು ಅನ್ನಿಸಿ ಅವಳಿಗೆ ಅವಳ ಬಗ್ಗೆಯೇ ಬೇಸರ ಮೂಡಿರಬಹುದೇ? ಅವಳು ನನ್ನನ್ನು ಹೀನಾಯವಾಗಿ ಕಂಡಳೇ ಅಥವಾ ತನ್ನ ಕುರಿತೇ ಕೀಳರಿಮೆಯಿಂದ ನರಳಿದಳೇ? ಮಿಲನದಲ್ಲಿ ಯಾರು ಮೇಲು, ಯಾರು ಕೀಳು? ಧುಮುಕಲಾರದ ಗಂಡೇ, ಆಳವಿಲ್ಲದ ಹೆಣ್ಣೇ? ಬೋರ್ಗರೆಯಲಾರದ ಕಡಲೇ, ಸೆಳೆದುಕೊಳ್ಳದ ದಡವೇ? ಮೊಳಕೆಯೊಡೆಯಲಾರದ ಬೀಜವೇ? ಅದಕ್ಕೆ ನೆರವಾಗದ ನೆಲವೇ?
ತಾನೀಗ ಆವತ್ತಿನ ಹಾಗೇ ಇದ್ದೇನಲ್ಲ? ಯಾಮಿನಿಯ ಮೇಲಿನ ಸಿಟ್ಟಿಗೆ ಊರ್ಮಿಳಾಳನ್ನೇನೋ ಅಹ್ವಾನಿಸಿದ್ದಾಯಿತು. ಊರ್ಮಿಳಾ ಬಂದುಬಿಟ್ಟಿದ್ದರೆ ತಾನು ಅವಳನ್ನು ಹೇಗೆ ಸಂತೈಸಬಹುದಿತ್ತು? ಅವಳಿಗೆ ಏನು ಕೊಡಬಹುದಾಗಿತ್ತು? ಕನಿಷ್ಠ ಅವಳು ಕೊಟ್ಟದ್ದನ್ನು ಸ್ವೀಕರಿಸುವ ಶಕ್ತಿಯಾದರೂ ತನ್ನಲ್ಲಿತ್ತಾ?
ಶೇಷು ಹೆಗಲಿಗೊಂದು ಚೀಲ ಸಿಕ್ಕಿಸಿಕೊಂಡು ಬಂದು ಮುಂದೆ ನಿಂತ. ಅವನು ಹೊರಡುವ ಹೊತ್ತಾಗಿತ್ತು. ಬರುತ್ತಾ ವಿಸ್ಕಿ ತರಬೇಕಾ ಕೇಳಿದ.
ಸಣ್ಣ ಸಣ್ಣ ಪ್ರಶ್ನೆಗಳೇ ಉತ್ತರಿಸಲಾಗದಷ್ಟು ಕಠಿಣವಾಗಿರುತ್ತವಲ್ಲ ಅನ್ನಿಸಿ ಚಿರಾಯು ತಲೆಯಾಡಿಸಿದ. ಶೇಷು ಅದನ್ನು ಹೇಗೆ ಬೇಕಿದ್ದರೂ ಸ್ವೀಕರಿಸಲಿ ಅಂದುಕೊಂಡು ಜೋಬಿನಿಂದ ಸಾವಿರ ರುಪಾಯಿ ತೆಗೆದು ಅವನ ಕೈಗಿಟ್ಟ.