Thursday, April 24, 2008

10. ನಡೆದ ಹಾದಿಯ ತಿರುಗಿ ನೋಡಬಾರದು ಏಕೆ?

ಚಿರಾಯುವಿಗೆ ಪ್ರಯಾಣವೆಂದರೆ ಇಷ್ಟ. ಅದೇ ಕಾರಣಕ್ಕೆ ಮೋಟರ್ ಸೈಕಲ್ ಡೈರೀಸ್ ಸಿನಿಮಾ ಕೂಡ ಇಷ್ಟ. ಝೆನ್ ಅಂಡ್ ಮೋಟರ್ ಸೈಕಲ್ ಮೇಂಟೆನೆನ್ಸ್ ಪುಸ್ತಕವೂ ಅಚ್ಚುಮೆಚ್ಚು. ಇಡೀ ಜೀವನವನ್ನು ಅಲೆಮಾರಿಯಾಗಿಯೇ ಕಳೆಯಬೇಕು ಅನ್ನುವ ಆಸೆ ಕೈಗೂಡದೇ ಹೋದದ್ದಕ್ಕೆ ಕಾರಣ ಅವನ ಮಹತ್ವಾಕಾಂಕ್ಷೆ.
ಇದೀಗ ನಲುವತ್ತೆರಡನೇ ವಯಸ್ಸಿನಲ್ಲಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪೈಕಿ ಅತ್ಯಂತ ಕಿರಿಯ ಎಂಬ ಹೆಮ್ಮೆ, ಮೆಚ್ಚುಗೆ ಮತ್ತು ಬೆರಗಿನಲ್ಲಿ ಚಿರಾಯು, ಮತ್ತೆ ತನ್ನ ಬಾಲ್ಯದ ಆಶೆಗಳಿಗೆ ಮರಳುವುದು ಸಾಧ್ಯವಾ ಅಂತ ನೋಡುತ್ತಿದ್ದಾನೆ. ತನ್ನ ಕಾದಂಬರಿ, ಅದರ ತಿರುಳು, ಅದರಲ್ಲಿ ತಾನು ಪ್ರತಿಪಾದಿಸಿದ ಹೊಸತನ ಎಲ್ಲಕ್ಕಿಂತಲೂ ತಾನು ಅತ್ಯಂತ ಸಣ್ಣ ವಯಸ್ಸಿನಲ್ಲೇ ಜ್ಞಾನಪೀಠ ತೆಗೆದುಕೊಳ್ಳುತ್ತಿದ್ದೇನೆ ಅನ್ನುವುದೇ ಮುಖ್ಯವಾಯಿತಲ್ಲ ಅಂತ ಚಿರಾಯು ಆಗಾಗ ಮರುಗುವುದಿದೆ. ಪ್ರಶಸ್ತಿ ಬಂದಾಗ ಒಂದಷ್ಟು ಗುಸುಗುಸು, ವಿವಾದ ಶುರುವಾಗಿತ್ತು. ಆದರೆ ಇಂಗ್ಲಿಷ್ ಪತ್ರಿಕೆಗಳು ಕೊಟ್ಟ ಪ್ರಚಾರ ಅದನ್ನೆಲ್ಲ ಮಸುಕಾಗಿಸಿತು. ಯಾಮಿನಿ ಇಂಗ್ಲಿಷ್ ಚಾನಲ್ಲುಗಳನ್ನು ಹಿಡಿದು, ಅವುಗಳಲ್ಲಿ ಸಂದರ್ಶನ, ಪ್ರೊಫೈಲು ಬರುವ ಹಾಗೆ ನೋಡಿಕೊಂಡು ಸಣ್ಣಪುಟ್ಟ ಮಾತುಗಳೆಲ್ಲ ಕೇಳಿಸದ ಹಾಗೆ ಮಾಡಿದ್ದಳು.
ಮುಖ್ಯವಾದ ಆರೋಪ ಬಂದದ್ದು ಕನ್ನಡದಿಂದಲೇ. ಚಿರಾಯುವನ್ನು ತುಂಬ ಇಷ್ಟಪಡುತ್ತಿದ್ದ ಕೊಂಡಜ್ಜಿ ನಾಗರಾಜನೇ ತರಲೆ ತೆಗೆದಿದ್ದ. ಅವನ ಟ್ಯಾಬ್ಲಾಯಿಡ್‌ನಲ್ಲಿ ಚಿರಾಯು ಜ್ಞಾನಪೀಠದ ರಹಸ್ಯ ಬಯಲು ಮಾಡಿದ ಲೇಖನ ಪ್ರಕಟಿಸಿದ್ದ. ಅವನ ಪ್ರಕಾರ ಚಿರಾಯುವಿಗೆ ಜ್ಞಾನಪೀಠ ಪ್ರಶಸ್ತಿ ಬರುವುದಕ್ಕೆ ಮುಖ್ಯ ಕಾರಣ, ಜ್ಞಾನಪೀಠ ಆಯ್ಕೆ ಸಮಿತಿಯಲ್ಲಿದ್ದ ಸುರೇಂದ್ರ ಬಸು. ಸುರೇಂದ್ರ ಬಸು ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದು ಚಿರಾಯುವಿನ ಶಿಷ್ಯೆ ನಳಿನಿ ಹೆಗಡೆ. ಅದಕ್ಕೆ ವ್ಯಾಪಕ ಪ್ರಚಾರ ಸಿಗುವಂತೆ ಮಾಡಿದ್ದು ಚಿರಾಯು. ಒಂದು ಕಾಲದಲ್ಲಿ ಚಿರಾಯು ಎಲ್ಲಿ ಹೋದರೂ ಸುರೇಂದ್ರ ಬಸು ಪ್ರಸ್ತಾಪ ಮಾಡುತ್ತಿದ್ದ. ನಳಿನಿ ಹೆಗಡೆಯನ್ನು ಸುರೇಂದ್ರನಿಗೆ ಒಪ್ಪಿಸಿಯೂಬಿಟ್ಟಿದ್ದ. ಪಾಂಡುರೋಗದಿಂದಾಗಿ ಮೈತುಂಬ ಬಿಳಿಯ ಮಚ್ಚೆಗಳಿದ್ದುದರಿಂದ ಸುರೇಂದ್ರ ಬಸುವಿನ ಹೆಂಡತಿ ಅವನಿಂದ ದೂರ ಇದ್ದುಬಿಟ್ಟಿದ್ದಳು. ಹೆಣ್ಣಿನ ಸಹವಾಸವೇ ಇಲ್ಲದೆ ಸುರೇಂದ್ರ ಬಸು, ಬಸವಳಿದು ಹೋಗಿದ್ದ. ಅಂಥ ಹೊತ್ತಲ್ಲಿ ಸಿಹಿನೀರಿನ ಬುಗ್ಗೆಯ ಹಾಗೆ ಸಿಕ್ಕವಳು ನಳಿನಿ ಹೆಗಡೆ. ಅವಳನ್ನು ಚಿರಾಯು ತನಗೆ ಒಪ್ಪಿಸಿದ್ದಕ್ಕೆ ಕೃತಜ್ಞತಾ ರೂಪದಲ್ಲಿ ಸಂದಾಯವಾದದ್ದು ಜ್ಞಾನಪೀಠ ಎಂಬರ್ಥದ ಲೇಖನ ಬರೆದಿದ್ದ. ತನ್ನನ್ನು ತಲೆಹಿಡುಕನ ಮಟ್ಟಕ್ಕೆ ತಂದಿದ್ದಕ್ಕೆ ಚಿರಾಯುವಿಗೆ ಬೇಸರವಾಗಿತ್ತು. ಗೆಳೆಯರೆಲ್ಲ ಸೇರಿ ಮಾನನಷ್ಟ ಮೊಕದ್ದಮೆ ಹೂಡುವಂತೆ ಒತ್ತಾಯಿಸಿದ್ದರು. ಆದರೆ, ಚಿರಾಯು ಅದಕ್ಕೆ ಪ್ರತಿಸ್ಪಂದಿಸಿರಲಿಲ್ಲ. ಅವನು ಕಾಲುಕೆರೆದು ಜಗಳ ಮಾಡುತ್ತಾನೆ ಅಂತ ನಿರೀಕ್ಷಿಸಿದ್ದ ಕೊಂಡಜ್ಜಿ ನಾಗರಾಜನಿಗೂ ನಿರಾಸೆಯಾಗಿತ್ತು.
ಜ್ಞಾನಪೀಠ ಪ್ರಶಸ್ತಿಯಿಂದಾಗಿ ಚಿರಾಯುವಿನ ಜೀವನಶೈಲಿಯಲ್ಲಿ ಅಂಥ ಬದಲಾವಣೆಯೇನೂ ಆಗಲಿಲ್ಲ. ಆದರೆ, ಪ್ರವಾಸಗಳು ಹೆಚ್ಚಿದವು. ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ ಭಾಷಣಗಳಿಗೆ ಕರೆ ಬರುತ್ತಿತ್ತು. ಅಲ್ಲಿಗೆ ಹೋದಾಗ ಇನ್ನೇನೋ ಜರಗಬಹುದು ಏನೋ ಪವಾಡ ನಡೆಯಬಹುದು ಎಂದು ನಿರೀಕ್ಷಿಸಿರುತ್ತಿದ್ದ ಚಿರಾಯುವಿಗೆ ಹೆಚ್ಚಿನ ಸಂದರ್ಭದಲ್ಲಿ ನಿರಾಸೆಯಾಗುತ್ತಿತ್ತು. ಅದೇ ಕಾರು ಪ್ರಯಾಣ, ಅದೇ ಹೊಟೆಲು, ಅದೇ ಭಾಷಣ, ಅದೇ ಪ್ರಶ್ನೋತ್ತರ, ಅದೇ ಮುಖಗಳು. ಕೊನೆಗೆ ಚಿರಾಯು ತಾನಿನ್ನು ಭಾಷಣಗಳಿಗೆ ಬರುವುದಿಲ್ಲ ಎಂದ. ಪತ್ರಿಕೆಗಳಿಗೆ ಸಂದರ್ಶನ ಕೊಡುವುದಿಲ್ಲ ಎಂದ. ಆದರೆ ಹಾಗೆ ಹೇಳಿ ಸುಮ್ಮನಿದ್ದ ತಕ್ಷಣ ವಿಚಿತ್ರ ಚಾಂಚಲ್ಯ ಕಾಡುತ್ತಿತ್ತು. ತಾನು ಅಪ್ರಸ್ತುತನಾಗುತ್ತಿದ್ದೇನೆ ಅನ್ನಿಸುತ್ತಿತ್ತು. ತನ್ನನ್ನು ಜ್ಞಾನಪೀಠದಲ್ಲಿಟ್ಟು ನೋಡದೇ, ಸಹಜವಾಗಿ ನೋಡಲಿ ಅಂತ ಮನಸ್ಸು ಹಂಬಲಿಸುತ್ತಿತ್ತು. ಎಲ್ಲದರ ಬಗ್ಗೆ ಪ್ರತಿಕ್ರಿಯಿಸುತ್ತಾ, ತನ್ನೂರ ಅಜ್ಜಂದಿರ ಹಾಗೆ ಹರಟುತ್ತಾ, ರೇಗಾಡುತ್ತಾ, ಖುಷಿಯಾಗುತ್ತಾ, ಸುಮ್ಮನೆ ಒಂದು ಹೇಳಿಕೆ ವಗಾಯಿಸುತ್ತಾ ಇರಬೇಕು ಅನ್ನುವ ಆಸೆಗೆ ಅಡ್ಡಿಯಾದದ್ದು ಜ್ಞಾನಪೀಠ.
ವಿರೋಧಿಗಳನ್ನು ಎದುರಿಸುವುದೇನೂ ಕಷ್ಟದ ಕೆಲಸ ಆಗಿರಲಿಲ್ಲ ಚಿರಾಯುವಿಗೆ. ಮೇಲ್ನೋಟಕ್ಕೆ ಅವನು ಹೇಗೇ ಪ್ರತಿಕ್ರಿಯಿಸಿದರೂ ಒಳಗೊಳಗೇ ಅವನಿಗೊಂದು ಆತ್ಮಶಕ್ತಿಯಿತ್ತು. ಯಾವ ಟೀಕೆಯೂ ಯಾವ ಮೆಚ್ಚುಗೆಯೂ ಅವನನ್ನು ಕಂಗಾಲು ಮಾಡುತ್ತಿರಲಿಲ್ಲ. ತನ್ನ ಸಂತೋಷ, ಬೇಸರ, ಕೋಪ, ಸಂಕೋಚ, ವಿನಯ ಎಲ್ಲವೂ ನಟನೆಯೆಂಬುದು ಚಿರಾಯುವಿಗೆ ಗೊತ್ತಿತ್ತು. ಅದನ್ನು ಯಾಮಿನಿ ಕೂಡ ಕಂಡುಕೊಂಡಿದ್ದಳು. ಹೊರಗಿನ ಟೀಕೆ ಮತ್ತು ಅಭಿಪ್ರಾಯಗಳನ್ನು ಹುಲುಮಾನವರ ಅನಿಸಿಕೆಗಳೆಂದು ನಿರಾಕರಿಸುವ ಅಹಂಕಾರ ಅದಾಗಿರಲಿಲ್ಲ. ಬದಲಾಗಿ, ಅಂಥ ಟೀಕೆ, ವಿಮರ್ಶೆ ಮತ್ತು ನಿಲುವುಗಳಿಂದ ತನ್ನ ಬೆಳವಣಿಗೆಯೂ ವಿನಾಶವೂ ಸಾಧ್ಯವಿಲ್ಲ ಅನ್ನುವುದನ್ನು ಚಿರಾಯು ಅರ್ಥ ಮಾಡಿಕೊಂಡಿದ್ದ.
ಅದು ಅವನಿಗೆ ಸ್ಪಷ್ಟವಾದದ್ದು ಯಾಮಿನಿ ಜೊತೆಗಿನ ಸಂಬಂಧ ಬಯಲಾದಾಗ. ಆಗಿನ್ನೂ ಅವನಿಗೆ ಜ್ಞಾನಪೀಠ ಬಂದಿರಲಿಲ್ಲ. ಯಾಮಿನಿ ಮತ್ತು ಚಿರಾಯು ಯಾವ ರಗಳೆಯೂ ಬೇಡ ಎಂದುಕೊಂಡು ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದರು. ಅಪರಿಚಿತರ ನಡುವೆ ವ್ಯಕ್ತಿತ್ವ ಕಳೆದುಕೊಂಡು ಕಟ್ಟಾ ಪ್ರೇಮಿಗಳಂತೆ, ಯಾರೂ ಅಲ್ಲದವರಂತೆ ಅಲೆದಾಡುವುದಷ್ಟೇ ಅವರಿಬ್ಬರ ಉದ್ದೇಶವಾಗಿತ್ತು. ಹಾಗೆ ಪ್ರವಾಸ ಹೋದಾಗ ಅಲ್ಲಿ ಆಕಸ್ಮಿಕವಾಗಿ ಸಿಕ್ಕಿದ್ದು ಪತ್ರಕರ್ತ ರಂಜನ್. ಅವನಿಗೆ ಯಾಮಿನಿ ಯಾರೆಂದು ಗೊತ್ತಿರಲಿಲ್ಲ. ಅವಳನ್ನು ತನ್ನ ಅಕ್ಕನ ಮಗಳು ಎಂದು ಪರಿಚಯ ಮಾಡಿಕೊಟ್ಟಿದ್ದ ಚಿರಾಯು. ಅಕ್ಕನ ಮಗಳ ಜೊತೆ ಚಕ್ಕಂದ ಅನ್ನುವ ವರದಿ ಚಿರಾಯು ವಾಪಸ್ಸು ಬರುವ ಹೊತ್ತಿಗೆ ಕಾಯುತ್ತಿತ್ತು. ಚಿರಾಯು ಮತ್ತು ಯಾಮಿನಿ ಜೊತೆಗಿರುವ ಫೋಟೋಗಳೂ ಇದ್ದವು.
ಆ ಸಲ ಮಾತ್ರ ಚಿರಾಯು ಕೆರಳಿದ್ದ. ಆ ಪತ್ರಿಕೆಯ ಮುಂದೆ ಧರಣಿ ಕೂತಿದ್ದ. ಜೊತೆಗೆ ಯಾಮಿನಿಯೂ ಇದ್ದಳು. ಆವತ್ತು ಚಿರಾಯು ಸ್ನೇಹ, ಬಾಂಧವ್ಯ, ಆತ್ಮಸಂಗಾತದ ಕುರಿತು ಮಾತನಾಡಿದ್ದ. ನಮ್ಮಿಬ್ಬರ ಸಂಬಂಧದ ಬಗ್ಗೆ ಯಾರು ಏನು ಬೇಕಾದರೂ ಮಾತಾಡಿಕೊಳ್ಳಬಹುದು. ಅದು ಅವರ ನೀಚತನವನ್ನಷ್ಟೇ ಸೂಚಿಸುತ್ತದೆ. ರಂಜನ್ ಅವನ ಹೆಂಡತಿಯನ್ನು ಎಷ್ಟು ಹಿಂಸಿಸುತ್ತಾನೆ ಅನ್ನುವುದು ನನಗೆ ಗೊತ್ತಿದೆ. ಅದರ ಬಗ್ಗೆ ಮಾತಾಡಿ ಆಕೆಯನ್ನು ನೋಯಿಸುವುದು ನನಗೆ ಇಷ್ಟವಿಲ್ಲ. ವೈಯಕ್ತಿಕ ಬದುಕಿನಲ್ಲಿ ಮಾಧ್ಯಮ ತಲೆಹಾಕುವುದನ್ನು ನಾನು ವಿರೋಧಿಸುತ್ತೇನೆ. ನಮ್ಮಿಬ್ಬರ ನಡುವಿನ ಸಂಬಂಧಕ್ಕೆ ನಾನು ವ್ಯಾಖ್ಯಾನ ಕೊಡಬೇಕಾಗಿಲ್ಲ. ಅದನ್ನು ಯಾರೂ ಪ್ರಶ್ನಿಸುವ ಅಗತ್ಯವೂ ಇಲ್ಲ. ನಾನು ಲೇಖಕನೇ ಹೊರತು ಸಮಾಜ ಸುಧಾರಕ ಏನಲ್ಲ. ನನ್ನ ನಡವಳಿಕೆಯನ್ನು ಯಾರೂ ತಿದ್ದಬೇಕಾಗಿಲ್ಲ, ನನಗೆ ಸಂಸ್ಕಾರ, ಸಂಸ್ಕೃತಿ ಕಲಿಸಬೇಕಾಗಿಲ್ಲ. ನಾನು ಸಜ್ಜನ ಅನ್ನುವ ಕಾರಣಕ್ಕೆ ಯಾರೂ ನನ್ನನ್ನು ಓದಬೇಕಾಗಿಲ್ಲ. ಕಚ್ಚೆ ಹಾಕಿಕೊಂಡು, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಸಂಧ್ಯಾವಂದನೆ ಮುಗಿಸಿ, ಇಡೀ ದಿನ ಜಪ ಮಾಡುತ್ತಾ, ಭಿಕ್ಷಾಟನೆ ಮಾಡಿ ಬದುಕುತ್ತಾ ಕೆಟ್ಟ ಕೃತಿ ಬರೆದರೆ ಯಾರಾದರೂ ಓದುತ್ತಾರಾ? ನಾನು ಚೆನ್ನಾಗಿ ಬರೆಯುತ್ತೇನೆ ಅನ್ನುವ ಕಾರಣಕ್ಕೆ ನನ್ನನ್ನು ಓದುತ್ತಾರೆ. ನನ್ನ ಜೀವನದಲ್ಲಿ ಯಾರೂ ತಲೆ ಹಾಕಬೇಕಾಗಿಲ್ಲ ಎಂದು ರೇಗಿದ್ದ ಚಿರಾಯು. ಅಷ್ಟಕ್ಕೇ ಬಿಡದೇ ಆ ಪತ್ರಿಕೆಯ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿದ್ದ. ಮೂರು ತಿಂಗಳ ನಂತರ ಪತ್ರಿಕೆ ಕ್ಷಮೆ ಕೇಳಿತ್ತು. ಆದರೆ ನ್ಯಾಯಾಲಯ ಪತ್ರಿಕೆಗಿಂತ ಜಾಸ್ತಿ ಅವನನ್ನು ಹಿಂಸಿಸಿತ್ತು. ಯಾಮಿನಿ ಯಾರು ಅನ್ನುವ ಪ್ರಶ್ನೆಯನ್ನು ಪ್ರತಿವಾದಿ ವಕೀಲ ಪರಿಪರಿಯಾಗಿ ಕೇಳಿ ಚಿರಾಯುವನ್ನು ನೋಯಿಸಿದ್ದ.
ಸುಳ್ಯಕ್ಕೆ ಇಪ್ಪತ್ತೆಂಟು ಕಿಲೋಮೀಟರ್ ಎನ್ನುವ ಬೋರ್ಡು ಕಾಣಿಸುತ್ತಿದ್ದಂತೆ ಶೇಷು ಚಿರಾಯು ಮುಖ ನೋಡಿದ. ಚಿರಾಯು ನಂಗೂ ಹಸಿವಾಗ್ತಿದೆ ಕಣೋ ಅಂದ. ಐದು ನಿಮಿಷದ ನಂತರ ಕಾರು ಸುಬ್ರಹ್ಮಣ್ಯ- ಸುಳ್ಯ ರಸ್ತೆಯಲ್ಲಿರುವ ಪುಟ್ಟ ಹೊಟೆಲೊಂದರ ಮುಂದೆ ನಿಂತಿತು.
ಇನ್ನೈದು ನಿಮಿಷಗಳಲ್ಲಿ ಚಿರಾಯುವಿನ ಮುಂದೆ ಹೊಗೆಯಾಡುವ ನೀರುದೋಸೆಯೂ ಕಾಣೆ ಮೀನಿನ ಸಾಂಬಾರೂ ಪ್ರತ್ಯಕ್ಷವಾಯಿತು. ಚಿರಾಯುವಿಗೆ ಯಾಮಿನಿಯ ತೋಳು ನೆನಪಾಯಿತು.