Wednesday, April 23, 2008

9. ನಿನ್ನ ಹಿಡಿಯೊಳಗಿತ್ತು ನನ್ನ ಬೆರಳು

ಹನ್ನೆರಡೂವರೆಗೆ ಶೇಷು ಬಂದ. ಒಂದು ರಾಶಿ ಪುಸ್ತಕಗಳನ್ನೂ ತಂದಿದ್ದ. ಅದರೊಟ್ಟಿಗೆ ಕಳೆದೊಂದು ವಾರದಲ್ಲಿ ಬಂದಿದ್ದ ಪತ್ರಗಳನ್ನೂ ತಂದಿದ್ದ. ಅವುಗಳನ್ನು ಓದುವ ಉತ್ಸಾಹ ಚಿರಾಯುವಿಗೆ ಇರಲಿಲ್ಲ. ಸುಮ್ಮನೆ ಪತ್ರಗಳನ್ನು ನೋಡುತ್ತಾ ಕುಳಿತವನನ್ನು ಓದುವಂತೆ ಪ್ರೇರೇಪಿಸಿದ್ದು ಆಕ್ಸ್‌ಫರ್ಡ್ ಯೂನಿವರ್ಸಿಟಿಯಿಂದ ಬಂದ ಪತ್ರ.
ಚಿರಾಯುವಿನ ಅವ್ಯಕ್ತ ಕಾದಂಬರಿಯ ಇಂಗ್ಲಿಷ್ ಅನುವಾದವನ್ನು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪಠ್ಯವನ್ನಾಗಿಸಲು ನಿರ್ಧರಿಸಿದೆ. ಅದಕ್ಕೆ ಅನುಮತಿ ಕೊಡಿ ಎಂದು ಸೂಸನ್ ಬರೆದ ಪತ್ರ ಅದು. ಅದರ ಬಗ್ಗೆ ಅವಳು ಆಗಲೇ ಮಾತಾಡಿದ್ದಳು. ಇದು ಅಧಿಕೃತ ಪತ್ರ. ಅದಕ್ಕೆ ಉತ್ತರಿಸಬೇಕು ಅಂತ ಆ ಕ್ಷಣ ಅನ್ನಿಸಲಿಲ್ಲ. ಉತ್ತರಿಸದೇ ಹೋದರೆ ಪ್ರಾಣ ತಿನ್ನುತ್ತಾಳೆ. ಉತ್ತರಿಸದೇ ಇರುವುದೂ ಒಂದು ಉತ್ತರ ಎಂದು ಯಾಕೆ ಯಾರೂ ಭಾವಿಸುವುದಿಲ್ಲ ಎಂದು ಯೋಚಿಸುತ್ತಾ ಉಳಿದ ಪತ್ರಗಳನ್ನು ಹಾಗೇ ಬದಿಗೆ ಸರಿಸಿ ಕುಳಿತ.
ಶೇಷು ಐದಾರು ದಿನಗಳ ಪತ್ರಿಕೆಗಳನ್ನೂ ತಂದಿದ್ದ. ಒಂದೆರಡರಲ್ಲಿ ಚಿರಾಯವಿನ ಬಗ್ಗೆ ಬರೆದಿದ್ದರು. ಚಿರಾಯು ತುಂಬ ಇಷ್ಟಪಡುವ ಹುಡುಗ ರಶೀದ್, ಲೇಖಕ ಮತ್ತು ಏಕಾಂತ ಅನ್ನುವ ಲೇಖನ ಬರೆದಿದ್ದ. ಹೇಗೆ ಚಿರಾಯು ತನ್ನ ಸೃಷ್ಟಿಕ್ರಿಯೆಗೆ ಬೇಕಾಗುಪ ಪರಿಸರವನ್ನು ಕಾದಂಬರಿಯ ಹೊರಗೂ ಒಳಗೂ ಸೃಷ್ಟಿಸಿಕೊಳ್ಳುತ್ತಾನೆ ಎನ್ನುವುದನ್ನು ರಶೀದ್ ವಿವರಿಸಿದ್ದು ಓದುತ್ತಿದ್ದಂತ ನಗುಬಂತು. ಒಂದು ಕಾಲದಲ್ಲಿ ತಾನು ಧ್ಯಾನಸ್ಥ ಸ್ಥಿತಿಯಲ್ಲಿ ಬರೆಯುತ್ತಿದ್ದೆ ಅಂದುಕೊಳ್ಳುತ್ತಿದ್ದ ಚಿರಾಯು. ಕ್ರಮೇಣ ಅದು ಸುಳ್ಳು ಅನ್ನುವುದು ತನಗೆ ಗೊತ್ತಾಯಿತಲ್ಲ. ಷೇಕ್ಸ್‌ಪಿಯರ್ ಬಾರುಗಳಲ್ಲಿ ಕುಡಿಯುತ್ತಾ, ಜಗಳಾಡುತ್ತಾ ಬರೆಯುತ್ತಿದ್ದ. ಬೋಧಿಲೇರನಿಗೆ ಯಾವ ಧ್ಯಾನಸ್ಥ ಸ್ಥಿತಿಯಿತ್ತು. ಪೋಲೀಸರ ಭಯದಲ್ಲಿ ನಡುಗುತ್ತಾ ಬರೆಯುತ್ತಿದ್ದ ಸಂಸರಿಗೆ ಧ್ಯಾನಸ್ಥರಾಗುವುದು ಸಾಧ್ಯವಿತ್ತಾ?
ಶೇಷು ತಾನು ಕೊಂಡು ತಂದ ಹೊಸ ಶರಟುಗಳನ್ನೂ ಮುಂದಿಟ್ಟು ಹೋಗಿದ್ದ. ಚಿರಾಯುವಿಗೆ ಹೊಸ ಬಟ್ಟೆಗಳನ್ನು ತಂದುಕೊಡುವುದು ಅವನೇ. ಇವತ್ತಿಗೂ ಹೊಸ ಶರ್ಟುಗಳೆಂದರೆ ಚಿರಾಯುವಿಗೆ ಇಷ್ಟ. ತಂದ ತಕ್ಷಣ ಅದನ್ನು ಒಗೆಯದೇ ಹಾಕಿಕೊಳ್ಳಬೇಕು. ಆ ಸಂಭ್ರಮವನ್ನು ತಾನು ಇವತ್ತಿಗೂ ಕಳಕೊಂಡಿಲ್ಲ ಎನ್ನುವಂತೆ ಶೇಷು ತಂದ ಅಷ್ಟೂ ಶರಟುಗಳನ್ನು ನೋಡಿದ. ತಾನು ಸಾವಿರ ರುಪಾಯಿ ಕೊಟ್ಟಿದ್ದರೂ ತನಗೆ ಖುಷಿಯಾಗಲಿ ಎಂದು ಶರ್ಟು ಕೊಂಡುತಂದಿದ್ದಾನೆ. ತಾನು ಸಂತೋಷವಾಗಿದ್ದರೆ ಅವನೂ ಖುಷಿಯಾಗಿರುತ್ತಾನೆ. ತನ್ನನ್ನು ಯಾರಾದರೂ ನೋಡುವುದಕ್ಕೆ ಬಂದರೆ ಖುಷಿಯಾಗಿ ಕಾಫಿ ಮಾಡಿಕೊಡುತ್ತಾನೆ. ಸಂದರ್ಶನಕ್ಕೆ ಬಂದರೆ ಅವನಿಗೆ ಸಂಭ್ರಮ. ತನ್ನ ಬಗ್ಗೆ ಬಂದ ಪತ್ರಿಕಾ ವರದಿಗಳನ್ನು ತಂದುತೋರಿಸುತ್ತಾನೆ. ಕೆಟ್ಟದಾಗಿ ಬರೆದಿದ್ದ ಪೇಪರುಗಳನ್ನು ಬಚ್ಚಿಡುತ್ತಾನೆ. ಆ ಪೇಪರಿನವರು ಫೋನ್ ಮಾಡಿದರೆ ಅವರು ಊರಲ್ಲಿಲ್ಲ ಅನ್ನುತ್ತಾನೆ.
ಯಾಕೋ ಇಷ್ಟು ಶರ್ಟು ತಂದೆ ಕೇಳಿದ ಚಿರಾಯು. ಶೇಷು ಸುಮ್ಮನೆ ನಕ್ಕ. ಅದು ಆಕ್ಷೇಪಣೆ ಅಲ್ಲ ಅನ್ನುವುದು ಅವನಿಗೆ ಗೊತ್ತು. ನಕ್ಕವನು ಅಲ್ಲಿ ನಿಲ್ಲದೆ ಒಳಗೆ ಹೋಗಿ ದೊಡ್ಡ ಗ್ಲಾಸಿನಲ್ಲಿ ಮಜ್ಜಿಗೆ ತೆಗೆದುಕೊಂಡು ಬಂದ. ಅದನ್ನು ಕುಡಿಯುತ್ತಿದ್ದ ಹಾಗೆ ಚಿರಾಯುವಿಗೆ ಮಜ್ಜಿಗೆಯನ್ನು ದ್ವೇಷಿಸುವ ಯಾಮಿನಿ ನೆನಪಾದಳು.
ಎಲ್ಲಾ ಪ್ಯಾಕ್ ಮಾಡು. ಕಾರು ರೆಡಿ ಮಾಡು ಅಂತ ಹೇಳಿ ಚಿರಾಯು ಸ್ನಾನಕ್ಕೆ ಹೋದ. ಶೇಷು ಎಲ್ಲಿಗೆ ಹೊರಡುವುದು, ಯಾಕೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವುದಕ್ಕೂ ಹೋಗಲಿಲ್ಲ. ಅವನು ಚಿರಾಯುವಿಗೆ ಇಷ್ಟವಾಗುವುದು ಅದಕ್ಕೇ. ಎಲ್ಲರಿಗೂ ಉತ್ತರ ಗೊತ್ತಿರುವ, ಮಾಮೂಲು ಉತ್ತರ ಇರುವ ಪ್ರಶ್ನೆಗಳೆಂದರೆ ಚಿರಾಯುವಿಗೆ ಅಲರ್ಜಿ. ಹೇಗಿದ್ದೀರಿ, ಮಗ ಏನ್ಮಾಡ್ತಿದ್ದಾನೆ. ಮಳೆ ಚೆನ್ನಾಗಿದೆಯಾ,. ಮಗಳ ಮದುವೆ ಆಯ್ತಾ, ಅಲ್ರೀ ದೇವೇಗೌಡರಿಗೆ ಏನಾಗಿದೆ, ಹಾಗಾಡ್ತಿದ್ದಾರಲ್ಲ ಮುಂತಾದ ಪ್ರಶ್ನೆಗಳನ್ನು ಚಿರಾಯು ಕೇಳುವುದೂ ಇಲ್ಲ, ಅವಕ್ಕೆಲ್ಲ ಉತ್ತರಿಸುವುದೂ ಇಲ್ಲ. ಅಂಥ
ಪ್ರಶ್ನೆಗಳನ್ನು ಮುಂದಿಟ್ಟಾಗ ನಕ್ಕು ಸುಮ್ಮನಾಗುತ್ತಾನೆ.
ಒಮ್ಮೊಮ್ಮೆ ಅಂಥ ಪ್ರಶ್ನೆಗಳಲ್ಲೇ ಜೀವಂತಿಕೆ ಇದೆಯೇನೋ ಅನ್ನಿಸುತ್ತದೆ. ಸಹಜ ಪ್ರಶ್ನೆಗಳವು. ವಾಟ್ ಡು ಯು ಸೇ ಆಫ್ಟರ್ ಯೂ ಸೇ ಹಲೋ ಎಂಬ ಎರಿಕ್ ಫ್ರಾಮ್ ಪ್ರಬಂಧ ನೆನಪಾಯಿತು. ಸಹಜೀವಿಗಳ ಜೊತೆ ಸಂಪರ್ಕ ಸಾಧಿಸಲು ಇಷ್ಟಪಡದವನನ್ನು ಕಾಡುವ ಪ್ರಶ್ನೆ ಅದಂತೆ. ಬ್ರಿಟಿಷರು ಇರುವುದೇ ಹಾಗೆ. ಮುಂದೇನು ಮಾತಾಡಬೇಕು ಎಂದು ತೋಚದ ಸ್ಥಿತಿ. ಏನು ಮಾತಾಡಿದರೂ ಮಾಮೂಲಾಗುತ್ತದೆ ಅನ್ನುವ ಭಯ. ತಾನು ಒಂದಕ್ಷರ ಬರೆಯುವಾಗಲೂ ಅದರಲ್ಲಿ ಇನ್ನೇನೋ ಇರಬೇಕು ಎಂದು ಬಯಸುತ್ತಿದ್ದ ಕಾಲವೊಂದಿತ್ತಲ್ಲ ಎಂದು ಚಿರಾಯು ನೆನಪಿಸಿಕೊಂಡ.
ಬಿಸಿನೀರು ಕಾದಿತ್ತು. ಆದರೆ ತಣ್ಣೀರೇ ಹಿತ ಅನ್ನಿಸುತ್ತಿತ್ತು. ಅಮ್ಮ ಬಿಸಿನೀರಿದ್ದಾಗಲೂ ತಣ್ಣೀರೇ ಸ್ನಾನ ಮಾಡುತ್ತಿದ್ದಳು. ಎಂಬತ್ತರ ವಯಸ್ಸಲ್ಲೂ ಅವಳಿಗೆ ತಣ್ಣೀರೇ ಇಷ್ಟವಾಗುತ್ತಿತ್ತು. ಉಬ್ಬಸ ಬಂದು, ಗಂಟಲು ಗೊರಗೊರ ಅನ್ನುತ್ತಿದ್ದರೂ ಬಿಸಿನೀರಿನ ಗೋಜಿಗೆ ಹೋದವಳಲ್ಲ. ತಣ್ಣೀರು ಸ್ನಾನ ಕೂಡ ಅವಳ ಪಾಲಿಗೆ ವ್ರತ. ತಣ್ಣೀರಲ್ಲಿ ಬೆಳ್ಳಂಬೆಳಗ್ಗೆ ಬಿಂದು ಜೋ ಜೋ ಶ್ರೀ ಕೃಷ್ಣ ಪರಮಾನಂದಾ... ಎಂದು ಹಾಡುತ್ತಾ ಮಜ್ಜಿಗೆ ಕಡೆಯಲು ಕುಳಿತರೆ ಅರ್ಧ ಗಂಟೆ ಆಕೆಯದೇ ಲೋಕ.
ಅಂಥ ಏಕಾಗ್ರತೆ ತನಗೆ ಸಿದ್ಧಿಸಲಿಲ್ಲ. ಒಂಟಿಯಾಗಿ ಕುಳಿತಾಗಲೂ ಯಾರ್‍ಯಾರೋ ಕದ ತಟ್ಟದೆ ಮನಸ್ಸಿನೊಳಗೆ ಬಂದು ಬಿಡುತ್ತಾರೆ. ಮಾತಿಗೆ ಕೂರುತ್ತಾರೆ. ಮಾತು ಹೊಳೆಯುವುದಿಲ್ಲ. ಅವರೊಂದಿಗೆ ಕಳೆದ ಕ್ಷಣಗಳು ಮಾತ್ರ ನೆನಪಾಗುತ್ತವೆ. ಯಾಮಿನಿಯ ಮುಖ ಕೂಡ ಎಷ್ಟು ಸಾರಿ ಮಸುಕಾಗಿಲ್ಲ. ಯಾಕೆ ಹಾಗಾಗುತ್ತೆ ಅಂತ ಯೋಚಿಸುತ್ತಾ ಚಿರಾಯು ಕನ್ನಡಿ ಮುಂದೆ ಬಂದು ನಿಂತ. ಮಂಜು ಮಂಜು ಮಧ್ಯಾಹ್ನ.
ಶೇಷು ಲಗೇಜನ್ನೆಲ್ಲ ಜೋಡಿಸಿಟ್ಟು ಕಾರು ಒರೆಸುತ್ತಿದ್ದ. ನಂತರ ಎಲ್ಲಾ ಲಗೇಜನ್ನೂ ಕಾರಿನೊಳಗಿಟ್ಟು ಪಕ್ಕದಲ್ಲಿ ಬಂದು ನಿಂತ. ಹೊರಡೋಣವೇ ಅನ್ನುವ ಆಹ್ವಾನ ಅವನು ನಿಂತ ಭಂಗಿಯಲ್ಲೇ ಇತ್ತು. ಚಿರಾಯು ತಲೆಯಾಡಿಸಿದ.
ವಂದನಾ ರಾವ್ ತಿಳಿನೀಲಿ ಬಣ್ಣದ ಫೇಡೆಡ್ ಜೀನ್ಸು ಮತ್ತು ತೆಳ್ಳಗಿನ ಟೀ ಶರ್ಟು ತೊಟ್ಟುಕೊಂಡು ತುಟಿಗೆ ತೆಳುವಾಗಿ ಲಿಪ್‌ಸ್ಟಿಕ್ ಹಚ್ಚಿಕೊಂಡು, ಒಂದೆರಡು ಮುಂಗುರಳನ್ನು ಹಾಗೇ ಹಾರಲು ಬಿಟ್ಟು ಕತ್ತಿನ ಬೆವರನ್ನು ಕರ್ಚೀಫಿನಿಂದ ಒರೆಸಿಕೊಂಡು ಚಿರಾಯುವಿನ ಮನೆ ಅಂಗಳಕ್ಕೆ ಬಂದು ನಿಲ್ಲುವ ಹೊತ್ತಿಗೆ, ಚಿರಾಯು ಮತ್ತು ಶೇಷು ಪ್ರಯಾಣ ಮಾಡುತ್ತಿದ್ದ ಕಾರು ಇಕ್ಕೆಲದಲ್ಲಿ ಹಸಿರು ಗದ್ದೆಯ ನಳನಳಿಸುತ್ತಿದ್ದ ರಸ್ತೆಯಲ್ಲಿ ಸಾಗುತ್ತಿತ್ತು.ಚಿರಾಯು ಹಸಿರನ್ನು ಕಣ್ತುಂಬಿಸಿಕೊಳ್ಳುತ್ತಾ ಯಾಮಿನಿಯ ಬಿಸುಪು ಕೈಯೊಳಗೆ ತನ್ನ ಕೈಯಿಟ್ಟು ನಡೆದ ಬೆಳದಿಂಗಳ ರಾತ್ರಿಯನ್ನು ನೆನಪಿಸಿಕೊಳ್ಳುತ್ತಿದ್ದ.