Monday, March 24, 2008

4. ಅಲೆ ಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ

ಆ ರಾತ್ರಿ ಚಿರಾಯುವಿಗೆ ನಿದ್ದೆ ಬರಲಿಲ್ಲ.
ಶೇಷುವಿಗೆ ಅರ್ಧ ಗಂಟೆಗೊಂದು ಟೀ ಮಾಡಿಕೊಡುವಂತೆ ಹೇಳಿ, ಬಾಲ್ಕನಿಗೆ ಬಂದು ಕುಳಿತುಕೊಂಡ. ಆರಾಮ ಖುರ್ಚಿಯಲ್ಲಿ ಕೂತವನಿಗೆ ನೆನಪಾದದ್ದು ಅಪ್ಪ. ಇದೇ ಹಳ್ಳಿಯ ರಂಗನಾಥೇಶ್ವರನ ದೇವಾಲಯದಲ್ಲಿ ಅರ್ಚಕ, ಮೊಕ್ತೇಸರ ಎಲ್ಲವೂ ಆಗಿದ್ದ ಸಿಡುಕು ಮೋರೆಯ ಅಪ್ಪ. ಅಪ್ಪ ದೇವರ ಹತ್ತಿರವೂ ಹಾಗೇ ಸಿಡುಕುತ್ತಿದ್ದರಾ, ಅವರಿಗೂ ದೇವರಿಗೂ ಸಮಾನ ಮಾಧ್ಯಮ ಏನಿತ್ತು. ಯಾರೋ ಕಲಿಸಿಕೊಟ್ಟ ಮಂತ್ರಗಳಿಂದ ದೇವರನ್ನು ಒಲಿಸಿಕೊಳ್ಳಬಲ್ಲೆ ಅನ್ನುವ ಅಹಂಕಾರ ಅವರಲ್ಲಿತ್ತಾ. ಅಥವ ಅದೊಂದು ವೃತ್ತಿ ಅಂದುಕೊಂಡು ಅವರು ಪೂಜೆ ಮಾಡುತ್ತಿದ್ದರಾ.
ಚಿರಾಯುವಿಗೆ ಅಂಥ ಪ್ರಶ್ನೆಗಳು ಹುಟ್ಟತೊಡಗಿದ ಹೊತ್ತಿಗೆ ಅಪ್ಪನ ಜೊತೆ ಮಾತಾಡಬೇಕು ಅನ್ನಿಸಿರಲಿಲ್ಲ. ಅವರು ಪ್ರಶ್ನೆಗಳ ವಿರೋಧಿ. ಪ್ರಶ್ನೆ ಕೇಳುವುದು ಅಪರಾಧ ಮತ್ತು ಅನಗತ್ಯ ಎಂಬಂತೆ ವರ್ತಿಸುತ್ತಿದ್ದವರು. ಹೀಗಾಗಿ ಯಾವ ಪ್ರಶ್ನೆಗೂ ಅವರು ಉತ್ತರಿಸುತ್ತಿರಲೂ ಇಲ್ಲ. ತನ್ನ ವಿಚಾರದಲ್ಲಿ ಅವರು ಕೊಂಚ ಉದಾರವಾಗಿಯೇ ವರ್ತಿಸಿದರು ಅಂತ ಆಗಾಗ್ಗೆ ಚಿರಾಯುವಿಗೆ ಅನ್ನಿಸುವುದುಂಟು. ತನಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅಪ್ಪನ ಕಾಲಿಗೆ ಬೀಳಬೇಕು, ಪ್ರಶಸ್ತಿಯನ್ನು ರಂಗನಾಥೇಶ್ವರ ದೇವಸ್ಥಾನಕ್ಕೆ ಒಯ್ದು ಪೂಜೆ ಮಾಡಿಸಬೇಕು ಅಂತ ತೀವ್ರವಾಗಿ ಅನ್ನಿಸಿತ್ತು. ಹಾಗೆ ಮಾಡಿದ್ದರೆ ದೊಡ್ಡ ವಿವಾದವಾಗುತ್ತಿತ್ತು. ಹಾಗಂತ ತಾನು ಅನ್ನಿಸಿದ್ದನ್ನು ಮಾಡದೇ ಬಿಟ್ಟವನಲ್ಲ. ಆದರೆ ಅಪ್ಪನ ಹತ್ತಿರ ಪ್ರಶಸ್ತಿ ಬಂದ ವಿಚಾರ ಹೇಳಿದಾಗ ಅವರು ಸಂತೋಷಪಟ್ಟಂತೇನೂ ಕಾಣಿಸಲಿಲ್ಲ.
ಅಪ್ಪ ತಾನು ಬರೆದದ್ದನ್ನು ಓದಿಯೇ ಇಲ್ಲ ಅಂದುಕೊಂಡಿದ್ದ ಚಿರಾಯು. ಆದರೆ ಅಪ್ಪ ಎಲ್ಲವನ್ನೂ ಓದುತ್ತಾರೆ ಕಣೋ, ಓದಿಲ್ಲದ ಹಾಗೆ ನಟಿಸುತ್ತಾರೆ. ನಿನ್ನ ಮೇಲೆ ಅವರಿಗೆ ಒಳಗೊಳಗೇ ಹೆಮ್ಮೆ, ಅಭಿಮಾನ ಎಲ್ಲ ಇದೆ. ಆದರೆ ಅದನ್ನು ಹೊರಗೆ ತೋರಿಸಿಕೊಳ್ಳಲು ಅವರ ಹಮ್ಮು ಬಿಡುವುದಿಲ್ಲ. ಗೊರಟಿರುವ ಕಾಡು ಮಾವಿನಕಾಯಿಯಂಥ ಸ್ವಭಾವ ಅವರದು. ಮಾತೆಲ್ಲ ನಾರು ನಾರು. ಮೇಲ್ನೋಟಕ್ಕಷ್ಟೇ ಒರಟರು ಅಂತ ಅಮ್ಮ ಒಂದೆರಡು ಸಾರಿ ಚಿರಾಯುವಿನ ಸಮಾಧಾನಕ್ಕೆ ಹೇಳಿದ್ದಿದೆ. ನಿಮ್ಮ ಮಗನಿಗೆ ಅತ್ಯಂತ ಚಿಕ್ಕ ವಯಸ್ಸಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ ಅಂತ ಶಾಮಣ್ಣ ಮೇಷ್ಟ್ರು ಹೇಳಿದಾಗ ಅಪ್ಪ ನಗಲೂ ಇಲ್ಲವಂತೆ. ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ನಡೆದು ಬಿಟ್ಟಿದ್ದರಂತೆ. ನಮ್ಮ ಯಾವ ಸಾಧನೆಯೂ ಅವರಿಗೆ ಸಂತೋಷ ಕೊಡೋದಿಲ್ಲ ಕಣೋ. ಅಮ್ಮ ಅವರಿಂದ ಸುಖಪಟ್ಟಿದ್ದು ಅಷ್ಟರಲ್ಲೇ ಇದೆ ಎಂದು ಅಕ್ಕ ಸರಸ್ವತಿ ಆಗಾಗ ಹೇಳಿ ಕಣ್ಣೀರು ಹಾಕುವುದುಂಟು.
ಚಿರಾಯು ಅದರಿಂದೇನೂ ತಲೆಕೆಡಿಸಿಕೊಂಡಿರಲಿಲ್ಲ. ಅಪ್ಪನ ಗುಣದಲ್ಲಿ ಒಂದಂಶ ತನಗೂ ಬಂದಿದೆಯೇನೋ ಅಂತಲೂ ಅವನಿಗೆ ಆಗಾಗ ಅನ್ನಿಸಿದ್ದುಂಟು. ತಾನೂ ಕೂಡ ಬೇರೆಯವರ ಬಗ್ಗೆ ಅಷ್ಟಾಗಿ ಚಿಂತೆ ಮಾಡಿದವನೇ ಅಲ್ಲ. ತನ್ನ ಪ್ರೀತಿ, ವಾತ್ಸಲ್ಯ, ಆತ್ಮೀಯತೆ, ಸಾಂತ್ವನ ಎಲ್ಲವೂ ಒಳಗಿನಿಂದ ಹುಟ್ಟಿದ್ದಾಗಿರದೇ, ಎಷ್ಟೋ ಸಂದರ್ಭದಲ್ಲಿ ಬರೀ ತೋರಿಕೆಯದಷ್ಟೇ ಆಗಿತ್ತಲ್ಲ ಅಂತ ಯೋಚಿಸುತ್ತಾನೆ ಚಿರಾಯು.
ಸಾಹಿತ್ಯದಲ್ಲಿ ಆದದ್ದೂ ಅದೇ. ಇನ್ನೊಬ್ಬರ ಕೃತಿಯನ್ನು ಮೆಚ್ಚಿ ಮಾತಾಡುವಾಗಲೂ ಅಲ್ಲಿ ತನ್ನ ಪ್ರತಿಭೆ, ಪಾಂಡಿತ್ಯವೇ ಕಾಣಬೇಕು ಎಂಬಂತೆ ಮಾತಾಡುತ್ತಿದ್ದ ಚಿರಾಯು. ಹೀಗಾಗಿ ತಾನು ಯಾರ ಬಗ್ಗೆ ಮೆಚ್ಚಿ ಮಾತಾಡಿದರೂ ಅಲ್ಲಿ ಕಾಣಿಸುತ್ತಿದ್ದದ್ದು ತಾನು ಮಾತ್ರ. ತನ್ನ ಸಮಕಾಲೀನರನ್ನೋ ತನಗಿಂತ ಪ್ರತಿಭಾವಂತರನ್ನೋ ಕುರಿತು ಬರೆದಾಗ ಕೂಡ ಓದುಗರು ಚಿರಾಯು ಎಷ್ಟು ಚೆನ್ನಾಗಿ ಬರೆಯುತ್ತಾನೆ ಎಂದು ಹೊಗಳುತ್ತಿದ್ದರೇ ವಿನಾ, ತಾನು ಸೂಚಿಸಿದ ಪದ್ಯವನ್ನು ಓದುತ್ತಿರಲಿಲ್ಲ ಎಂದು ಗೊತ್ತಾದದ್ದೇ ತನಗೆ ಕಾಲಜ್ಞಾನಿಯ, ಪ್ರವಾದಿಯ ಪಟ್ಟಕ್ಕೇರಿದಷ್ಟು ಸಂತೋಷವಾಗಿತ್ತಲ್ಲ. ತನ್ನ ಮಾತುಗಳು ಪ್ರವಾದಿಯ ಮಾತುಗಳಲ್ಲ, ದಾರ್ಶನಿಕನದು ಎಂಬಂತೆ ಸ್ವೀಕರಿಸುತ್ತಿದ್ದವರ ಸಾಲೂ ದೊಡ್ಡದಿತ್ತು.
ಹಳೆಯದರಿಂದ ಕಳಚಿಕೊಂಡು, ತಾನು ಇದುವರೆಗೆ ಬರೆದದ್ದರ ನೆರಳು ಕೂಡ ಬೀಳದಂತೆ ಬರೆಯಬೇಕು ಎಂದು ಕೂತವನಿಗೆ ಮತ್ತೆ ಮತ್ತೆ ಇದೆಲ್ಲ ಯಾಕೆ ನೆನಪಾಗುತ್ತವೆ ಎಂದು ಗೊತ್ತಾಗದೇ, ಚಿರಾಯು ಚಡಪಡಿಸಿದ. ಶೇಷು ತಂದಿಟ್ಟ ಮೂರನೇ ಟೀ ತಣ್ಣಗಾಗುತ್ತಿತ್ತು. ತಾನೇ ಬರೆದದ್ದನ್ನು ಮತ್ತೊಮ್ಮೆ ಓದಬೇಕು ಅನ್ನಿಸಿತು. ಹಾಗೆ ಓದುವ ಮೂಲಕ ಅದರಿಂದ ಬಿಡುಗಡೆ ಪಡೆಯುವುದು ಸಾಧ್ಯವಾದೀತೇನೋ. ತನ್ನ ಆರಂಭದ ಕತೆಗಳಾಗಲೀ, ಕವಿತೆಗಳಾಗಲೀ ತನಗೆ ನೆನಪಿಲ್ಲ. ಅವ್ಯಕ್ತ ಕಾದಂಬರಿಯಲ್ಲಿ ಬರುವ ವಿಧವೆಯ ಪಾತ್ರದ ಬಗ್ಗೆ ಸುಶೀಲ್ ಸಹಾನಿ ಮೆಚ್ಚಿ ಮಾತಾಡುತ್ತಿದ್ದ. ಆ ಪಾತ್ರದ ಚಹರೆಯೇ ಮರೆತುಹೋಗಿದೆ.
ಚಿರಾಯು ಶೇಷುವನ್ನು ಕರೆದು ನಾಳೆ ಬೆಳಗ್ಗೆ ಬೆಂಗಳೂರಿಗೆ ಹೋಗಿ, ತನ್ನ ಅಷ್ಟೂ ಪುಸ್ತಕಗಳನ್ನು ತಂದುಬಿಡುವಂತೆ ಸೂಚಿಸಿದ. ಹೋಗಿ ಬರುವುದಕ್ಕೆ ಒಂದು ದಿನವಾಗುತ್ತದೆ ಎಂದು ಆತಂಕಗೊಂಡ ಶೇಷುವಿಗೆ, ಏನೂ ಪರವಾಗಿಲ್ಲ. ನಾನೇ ಅಡುಗೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ಕೊಟ್ಟ. ಯಾವುದಕ್ಕೂ ಒಂದಷ್ಟು ಬ್ರೆಡ್ಡು ಮೊಟ್ಟೆ ತಂದಿಟ್ಟಿರು. ಹಣ್ಣು ಸೌತೆಕಾಯಿಯೂ ಇರಲಿ ಎಂದ. ಶೇಷು ತಲೆಯಾಡಿಸಿ ಹೊರಟು ಹೋದ.
ಬದಕುವ ಮೂಲಕ ಬದುಕಿನಿಂದ ಬಿಡುಗಡೆ ಪಡೆಯುವ ಹಾಗೆ, ಓದುವ ಮೂಲಕ ಬರೆದದ್ದರಿಂದ ಮುಕ್ತಿ ಹೊಂದಲು ಸಾಧ್ಯವಾ. ತಾನೀಗ ಏನು ಬರೆದರೂ ಅದು ತಾನು ಈ ಹಿಂದೆ ಬರೆದದ್ದಕ್ಕೆ ವಿರುದ್ಧವಾಗಿ ಕಾಣಿಸುತ್ತದಾ. ಈ ವಿರೋಧಾಭಾಸವನ್ನು ಯಾರಾದರೂ ಗುರುತಿಸುತ್ತಾರಾ. ಕನ್ನಡದಲ್ಲಿ ಅಂಥ ಜಾಣರಿಲ್ಲ. ತನ್ನನ್ನು ಚುಚ್ಚುವುದಕ್ಕೆಂದು ವಿಮಲೇಂದ್ರ ಅಂಥ ಪ್ರಯತ್ನ ಮಾಡಿದರೂ ಮಾಡಬಹುದು. ಅವನ ಟೀಕೆಗಳಿಗೆ ನಕ್ಕು ಸುಮ್ಮನಾಗಬಹುದು. ಆದರೆ, ರಾಷ್ಟ್ರೀಯ ಅಂತಾರಾಷ್ಟ್ರೀಯ ಸಾಹಿತ್ಯಕ ವಲಯದ್ದೇ ಭಯ. ಇಂಗ್ಲಿಷ್ ಪತ್ರಿಕೆಗಳಲ್ಲಿ ಅವು ಪ್ರಕಟವಾಗುತ್ತವೆ. ಚಾನಲ್ಲುಗಳಲ್ಲಿ ಬರುತ್ತವೆ.
ಚಿರಾಯು ಕಣ್ಮುಚ್ಚಿ ಯೋಚಿಸಿದ.
ಸದ್ಯದ ತಲ್ಲಣ ಮತ್ತು ನಿಷ್ಕ್ರಿಯತೆಯಿಂದ ಪಾರಾಗಬೇಕು ಅನ್ನಿಸಿತು. ಕಾಡು ಹರಟೆಯೊಂದೇ ಅದಕ್ಕೆ ದಾರಿ ಅಂದುಕೊಂಡು ಶೇಷುವಿನ ಕಡೆ ತಿರುಗಿದ. ಮೌನ ಅರ್ಥವಾದವನ ಹಾಗೆ ಶೇಷು ಮೊಬೈಲು ತಂದುಕೊಟ್ಟ.
ರಾತ್ರಿ ಎರಡೂವರೆ ಗಂಟೆಯಾಗಿದೆ ಅನ್ನುವುದನ್ನು ಮನಸ್ಸಿಗೆ ತಂದುಕೊಳ್ಳುತ್ತಲೇ, ಆ ಹೊತ್ತಲ್ಲಿ ಅವಳು ಮಲಗಿರುತ್ತಾಳೆ ಎಂದು ಗೊತ್ತಿದ್ದೂ, ಯಾಮಿನಿಯನ್ನು ನೋಯಿಸಲಿಕ್ಕಾದರೂ ತಾನು ಹೀಗೆ ಮಾಡಬೇಕು ಅಂದುಕೊಂಡು ಊರ್ಮಿಳಾ ದೇಸಾಯಿಯ ನಂಬರ್ ಡಯಲ್ ಮಾಡಿದ.
ಮೂರನೇ ರಿಂಗಿಗೆ ಅತ್ತ ಕಡೆಯಿಂದ ಬಿಸಿ ಕಾಫಿಯಂಥ ದನಿಯೊಂದು ಚಿರೂ ಅಂದಿತು.