Friday, March 21, 2008

2. ಬರದೆ ಹೋದೆ ನೀನು

ಯಾಮಿನಿ ಬರಲಿಲ್ಲ.
ನಾಲ್ಕೇ ದಿನಕ್ಕೆ ಅಕ್ಕನ ಮದುವೆ. ಆಮೇಲೆ ಪ್ಯಾರಿಸ್ಸಿಗೆ ಹೋಗುವುದಿದೆ. ಗೆಳೆಯ ಹೋಗುತ್ತಿದ್ದಾನೆ. ಈ ಅವಕಾಶ ಬಿಟ್ಟರೆ ಮತ್ತೆ ಹೋಗುವುದಕ್ಕೆ ಆಗುವುದಿಲ್ಲ. ಪ್ಯಾರಿಸ್ಸಿನ ಮೇಲೆ ನನಗೇನೂ ಅಂತ ಮೋಹವಿಲ್ಲ. ಆದರೆ ಸೀನ್ ನದಿಯನ್ನೊಮ್ಮೆ ನೋಡಬೇಕು. ರಾಘವೇಂದ್ರ ಖಾಸನೀಸರ ಮೊನಾಲಿಸಾ ಕತೆಯನ್ನು ಓದಿದ ಮೇಲಂತೂ ಪ್ಯಾರಿಸ್ಸು ಮತ್ತಷ್ಟು ಹತ್ತಿರವಾಗಿದೆ. ಪ್ಲೀಸ್ ತಪ್ಪು ತಿಳೀಬೇಡ ಅಂತ ನಾನು ನಿನ್ನನ್ನು ಕೇಳಬೇಕಾಗಿಲ್ಲ. ನಾನು ಪರಸ್ಪರರ ಬಗ್ಗೆ ತಪ್ಪು ತಿಳಿಯಬಾರದು ಎಂದು ನಿರ್ಧರಿಸಿ ಬಹಳ ಕಾಲವಾಯಿತು. ಬಂದ ತಕ್ಷಣ ಬರುತ್ತೇನೆ ಅಂತ ಯಾಮಿನಿಯೇ ಫೋನಲ್ಲಿ ಮಾತಾಡಿದಳು. ಜಾಣೆ, ಮಾತಾಡುವ ಮೊದಲೇ ಎಸ್ಸೆಮ್ಮೆಸ್ಸು ಕಳುಹಿಸಿ ಮಾನಸಿಕವಾಗಿ ತನ್ನನ್ನು ಆ ಸುದ್ದಿಗೆ ಸಿದ್ಧಮಾಡಿಟ್ಟಿದ್ದಳು.
ಬರುವುದಿಲ್ಲ ಅಂತ ಗೊತ್ತಾದ ಮೇಲೆ ಏನು ಹೇಳಿದರೂ ಅದು ಬರೀ ನೆಪವಷ್ಟೇ. ಆ ನೆಪದಿಂದ ಇಬ್ಬರ ಮನಸ್ಸಿಗೂ ಸ್ವಲ್ಪ ಸಮಾಧಾನ ಆಗಬಹುದೇನೋ. ನೆಪ ಹೇಳಿಸಿಕೊಂಡವನಿಗಿಂತ ನೆಪ ಹೇಳಿದವಳಿಗೇ ಅದರಿಂದ ನೆಮ್ಮದಿ. ಆಕೆ ಈಗ ನಿರಾಳವಾಗಿದ್ದಾಳೆ. ಮುಂದೆ ಯಾವತ್ತಾದರೂ ಜಗಳ ಆದರೆ ಆವತ್ತು ನಾನು ನಿನಗೆ ಎಲ್ಲಾ ವಿವರವಾಗಿ ಹೇಳಿದ್ದೆ. ನಿನಗೆ ಅಷ್ಟು ಪ್ರೀತಿಯಿದ್ದರೆ ಆವತ್ತೇ ಸ್ಪಷ್ಟವಾಗಿ ಹೇಳಬೇಕಾಗಿತ್ತು-ನೀನು ಹೋಗಕೂಡದು ಅಂತ. ಹಾಗೆ ಕೇಳಿ ಕಟ್ಟಿಹಾಕಿಕೊಳ್ಳುವ ಧೈರ್ಯ ನಿನಗಿಲ್ಲ ಅಂತ ಮಾತು ತೆಗೆಯುತ್ತಾಳೆ.
ಯಾಮಿನಿ ಇಲ್ಲಿಗೆ ಬಂದಾದರೂ ಏನು ಮಾಡುವುದಿತ್ತು ಎಂದು ಚಿರಾಯು ಯೋಚಿಸಿದ. ಆಕೆ ಬಂದರೆ ಮತ್ತದೇ ಪ್ರೀತಿ, ತಬ್ಬುಗೆ, ಇಳಿಸಂಜೆಗಳಲ್ಲಿ ವಾಕಿಂಗು, ಸುಸ್ತಾಗಿ ಬಂದು ಮತ್ತೊಂದು ಸುತ್ತು ಪ್ರೀತಿ, ಮತ್ತೆ ಭಯಂಕರ ಸುಸ್ತು. ನಿದ್ದೆಯಿಂದ ಏಳುವ ಹೊತ್ತಿಗೆ ಯಾಮಿನಿ ವಾಕಿಂಗು ಹೋಗಿರುತ್ತಾಳೆ. ಮೊಬೈಲು ಫೋನ್ ಮಾಡಿದರೆ ಎಂಗೇಜು. ಆಕೆ ಬೆಳಗ್ಗೆ ವಾಕಿಂಗು ಹೋಗುವುದು ದೇಹದ ತೂಕ ಇಳಿಸುವುದಕ್ಕೋ ಮನಸ್ಸಿನ ಭಾರ ಇಳಿಸಿಕೊಳ್ಳುವುದಕ್ಕೋ ಎಂದು ಅನುಮಾನ. ಆದರೆ ಅದನ್ನು ಕೇಳುವಂತಿಲ್ಲ. ತನ್ನ ಭಾರತೀಯ ಮನಸ್ಸು ಅವಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಸಹಿಸಿಕೊಳ್ಳುವುದು ಸಾಧ್ಯವೇ ಇಲ್ಲ ಅಂತ ಚಿರಾಯುವಿಗೆ ಅನೇಕ ಸಾರಿ ಅನ್ನಿಸಿದ್ದಿದೆ. ಹೀಗಾಗಿ ಮತ್ತೆ ಮತ್ತೆ ಮನಸ್ಸಿಗೆ ಬರುವ ಮದುವೆಯ ಪ್ರಸ್ತಾಪವನ್ನು ಅವನೇ ತಳ್ಳಿ ಹಾಕುತ್ತಾನೆ. ಯಾಮಿನಿಯನ್ನು ಪ್ರೀತಿಸಬಹುದು, ಮುದ್ದಿಸಬಹುದು. ಆದರೆ ಅವಳನ್ನು ಮದುವೆಯಾಗಿ ಹೆಂಡತಿಯ ಸ್ಥಾನದಲ್ಲಿಟ್ಟು ನೋಡುವುದು ಸಾಧ್ಯವೇ ಇಲ್ಲ ಎಂದು ಅವನಿಗೆ ಅನೇಕ ಸಾರಿ ಅನ್ನಿಸಿದೆ.
ಹೆಂಡತಿ ಅಂದಾಗ ಅವನಿಗೆ ನೆನಪಾಗುವುದು ಶಿವಣ್ಣನ ಹೆಂಡತಿ ಮಾಲವಿಕಾ. ಇಷ್ಟಗಲ ಕುಂಕುಮ ಇಟ್ಟುಕೊಂಡು ತಾನುಟ್ಟ ಜರಿಸೀರೆಯ ಅಂಚನ್ನು ತಾನೇ ಮೆಚ್ಚುತ್ತಾ ಬನ್ನಿ ಅಂತ ಕರೆಯುವ ಆಹ್ವಾನದಲ್ಲಿ ಆಪ್ತವಾಗುತ್ತಾ, ಆ ಆಹ್ವಾನದಲ್ಲಿರುವುದು ಮಾದಕತೆಯೋ ಪ್ರೀತಿಯೋ ಗೌರವವೋ ಆದರವೋ ಆತ್ಮೀಯತೆಯೋ ಅನ್ನುವುದನ್ನು ಅವರವರ ಭಾವಕ್ಕೆ ಬಿಡುತ್ತಾ
ಮಾತಿನ ನಡುನಡುವೆ ಗಂಡನನ್ನು ಅತ್ಯಂತ ಸುಖೀ ಗೃಹಿಣಿಯಂತೆ ನೋಡುತ್ತಾ, ಅವನು ಬೈದಾಗ ಕಣ್ಣಲ್ಲೇ ಕ್ಷಮೆ ಕೇಳುತ್ತಾ, ಅವನು ತಪ್ಪು ಮಾಡಿದಾಗ ಛೇಡಿಸುತ್ತಾ, ತನಗೆ ಅವನು ಕೊಟ್ಟಂಥ ಸುಖವನ್ನು ಯಾರೂ ಕೊಡಲಾರರು, ಅವನಿಗೆ ನಾನು ಕೊಡುವ ಸುಖವನ್ನು ಜಗತ್ತಿನ ಯಾವ ಸುಖವೂ ಸರಿಗಟ್ಟಲಾರದು ಎಂಬಂತೆ ಓಡಾಡುವ ಮಾಲವಿಕಾ ಚಿರಾಯುವಿನ ಪಾಲಿಗೆ ಅಚ್ಚರಿ. ತನ್ನನ್ನು ಚಿರಾಯು ಸೂಕ್ಷ್ಮವಾಗಿ ಗಮನಿಸುತ್ತಾನೆ ಅಂತ ಗೊತ್ತಾದ ತಕ್ಷಣ ಅವಳು ಮತ್ತಷ್ಟು ಲವಲವಿಕೆ ತುಂಬಿಕೊಂಡಿದ್ದಳು. ಹಾಗಿದ್ದರೂ ಅವಳ ವರ್ತನೆಯಲ್ಲಿ ಪುಟ್ಟ ಮಗುವಿನ ಗುಣವೂ ಇದೆಯೇನೋ ಎಂದು ಅನುಮಾನಿಸುತ್ತಿದ್ದ ಚಿರಾಯು.
ಚಿರಾಯು ಹೀಗೆ ನಲುಗುವುದನ್ನು ಬರೆಯಲಾಗದೆ ಒದ್ದಾಡುವುದನ್ನು ಶೇಷು ಗಮನಿಸುತ್ತಾ ಕೂತಿದ್ದ. ತಾನಿಲ್ಲಿಂದ ಹೊರಟು ಬಿಡುತ್ತೇನೆ ಅಂತ ಅವನಿಗೆ ಅನ್ನಿಸೋದಕ್ಕೆ ಶುರುವಾಗಿರಬೇಕು ಅಂದುಕೊಂಡ ಚಿರಾಯು. ಹದಿನೈದು ವರುಷಗಳಿಂದ ತನ್ನ ಜೊತೆಗಿದ್ದಾನೆ. ತನ್ನ ಕಾಡುಹಂದಿಯಂಥ ವಿಚಿತ್ರ ಮತ್ತು ಅನೂಹ್ಯ ಆಲೋಚನೆಗಳು ಅವನಿಗೆ ಗೊತ್ತಾಗುತ್ತವೆ. ಯಾವಾಗ ತನ್ನ ಮುಂದೆ ನಿಲ್ಲಬೇಕು, ಯಾವಾಗ ಮಾತಾಡಬೇಕು, ಕಣ್ಸನ್ನೆ ಏನು ಹೇಳುತ್ತದೆ, ಮೈಮುರಿದರೆ ಏನರ್ಥ ಅನ್ನುವುದೆಲ್ಲ ಅವನಿಗೆ ಗೊತ್ತು. ಯಾವ ಹೆಂಡತಿಯೂ ಅರ್ಥ ಮಾಡಿಕೊಳ್ಳದಷ್ಟು ಚೆನ್ನಾಗಿ ತನ್ನನ್ನು ಅರ್ಥ ಮಾಡಿಕೊಂಡಿದ್ದಾನೆ ಅಂತ ಅನ್ನಿಸುವ ಹೊತ್ತಿಗೇ ಅದು ಅರ್ಥ ಮಾಡಿಕೊಂಡದ್ದಾ ಅವನ ಅನಿವಾರ್ಯತೆಯಾ ಎಂಬ ಪ್ರಶ್ನೆ ಎದುರಾಯಿತು. ಹೆಂಡತಿಗೆ ಸ್ವಂತದ್ದೊಂದು ವ್ಯಕ್ತಿತ್ವ ಇರುತ್ತೆ, ಇವನಿಗೆ ಅದಿರೋದಿಲ್ಲ. ವ್ಯಕ್ತಿತ್ವ ಇಲ್ಲದೇ ಇರುವವರು ಮಾತ್ರ ನಮ್ಮ ಅಹಂಕಾರಕ್ಕೆ ಹತ್ತಿರವಾಗಬಲ್ಲರು.
ಹಾಗಂತ ಹೊಳೆದದ್ದೇ ತಡ, ಅದನ್ನೊಂದು ಪಾತ್ರವಾಗಿಸಬಹುದೇನೋ ಎಂದುಕೊಂಡು ಚಿರಾಯು ಪುಟ್ಟ ಟಿಪ್ಪಣಿ ಗೀಚಿಕೊಂಡ.
ಪಕ್ಕದಲ್ಲೇ ತಾನು ಬರೆದಿಟ್ಟ ಐದು ಸಾಲುಗಳು ಮತ್ತೆ ಕಾಣಿಸಿದವು. ಅವುಗಳನ್ನು ಓದುತ್ತಿದ್ದಂತೆ ತುಂಬ ಕಳಪೆಯಾಗಿದೆ ಅನ್ನಿಸಿತು. ಮನಸ್ಸು ಮಾಡಿದರೆ ಅದಕ್ಕಿಂತ ತೀವ್ರವಾಗಿ ಬರೆಯುತ್ತೀಯಾ. ಇದರಲ್ಲೇನಿದೆ ಅಂತ ಯಾಮಿನಿ ಓದಿದ ತಕ್ಷಣ ಕಾಮೆಂಟ್ ಮಾಡುತ್ತಾಳೆ. ಇದನ್ನು ಅವಳಿಗೆ ತೋರಿಸುವುದೋ ಬೇಡವೋ ಫೋನ್ ಮಾಡಿ ಓದಿ ಹೇಳಿಬಿಡಲಾ..
ಚಿರಾಯು ಫೋನ್ ಕೈಗೆತ್ತಿಕೊಂಡ.
ಯಾಮಿನಿಯ ಫೋನ್ ಬಿಜಿಯಾಗಿತ್ತು.