Thursday, March 20, 2008

1. ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ....

ತುಂಬ ದೊಡ್ಡ ಗಾತ್ರದ ಮೊಲೆಗಳಿಗಿಂತ ಅಂಗೈಯೊಳಗೆ ಹಿಡಿಯಬಹುದಾದ ಗುಬ್ಬಚ್ಚಿಯಂಥ ಮೊಲೆಗಳೇ ಅನುಕೂಲಕರ ಮತ್ತು ಕ್ಷೇಮ ಎಂದು ಅರಿವಾಗುವ ಹೊತ್ತಿಗೆ ಜಯದೇವನಿಗೆ ನಲವತ್ತು ದಾಟಿದೆ. ಹಾಗಿದ್ದರೂ ದೊಡ್ಡ ಮೊಲೆಗಳ ಕುರಿತ ವ್ಯಾಮೋಹವನ್ನು ಕಳೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲವಲ್ಲ ಎಂದು ಅವನಿಗೆ ಸಂತೋಷವಾಗುವುದುಂಟು. ತಾನೆಲ್ಲಿ ವಿರಾಗಿಯಾಗಿಬಿಡುತ್ತೇನೋ ಎಂಬ ಭಯದಿಂದ ತನ್ನನ್ನು ಪಾರುಮಾಡುವುದೇ ಈ ಸ್ಥನಗಳೇನೋ ಎಂದು ಅನ್ನಿಸಿದಾಗೆಲ್ಲ ಅವನ್ನು ತಾನು ಮುಟ್ಟಿ ಮುದ್ದಿಸಿದ ಮೊಲೆಗಳ ಬಗ್ಗೆ ಕೃತಜ್ಞನಾಗುತ್ತಾನೆ.’
ಆರು ದಿನಗಳ ಹಿಂದೆ ತಾನೇ ಬರೆದಿಟ್ಟ ಐದು ಸಾಲುಗಳನ್ನು ಚಿರಾಯು ಮತ್ತೊಮ್ಮೆ ಓದಿದ. ಕಳೆದಾರು ದಿನಗಳಲ್ಲಿ ಆ ಸಾಲುಗಳನ್ನು ಅವನು ನೂರಾರು ಸಲ ಓದಿದ್ದಾನೆ. ಕಾದಂಬರಿ ಆ ಸಾಲುಗಳಿಂದಲೇ ಯಾಕೆ ಶುರುವಾಯಿತು ಅನ್ನುವ ಪ್ರಶ್ನೆಗೆ ಅವನಿಗೆ ಉತ್ತರ ಸಿಗಲಿಲ್ಲ. ಅಷ್ಟು ಶೃಂಗಾರಮಯವಾಗಿಯೋ ಲಜ್ಜೆಗೇಡಿಯಂತೆಯೋ ಬರೆಯುವುದು ನವ್ಯದ ಶೈಲಿಯಾಯಿತಲ್ಲವೇ? ಈಗ ತೀರ ಹೊಸತೆನಿಸುವಂತೆ ಬರೆಯಲು ಹೊರಟವನನ್ನು ನವ್ಯದ ಅದೇ ಹಳೆಯ ಗುಂಗು ಯಾಕೆ ಕಾಡಬೇಕು? ವಿಮರ್ಶಕರು ಅದನ್ನು ಒಪ್ಪುತ್ತಾರಾ? ಹೋಗಲಿ, ಓದುಗರಿಗೆ ಅದರಲ್ಲಿ ಆಸಕ್ತಿ ಹುಟ್ಟಲು ಸಾಧ್ಯವಾ? ಓದುಗರೂ ತುಂಬ ಬೆಳೆದಿರುತ್ತಾರೆ. ಮಾಧ್ಯಮಗಳು ಬಂದಿವೆ. ಏನು ಬೇಕಾದರೂ ನೋಡುವ, ಪಡೆಯುವ ಸ್ವಾತಂತ್ರ್ಯ ಇದೆ. ಹೆಣ್ಮಕ್ಕಳೂ ಮೊದಲಿನ ಹಾಗೆ ಒಳಗೊಳಗೇ ಬೆಂದು ಬಳಲುವುದಿಲ್ಲ. ಎಲ್ಲಾ ಹೇಳಿಕೊಂಡು ಮಾಡಿಕೊಂಡು ಸುಖವಾಗಿರುತ್ತಾರೆ. ಅಂಥದ್ದರಲ್ಲಿ..
ಬೇರೆ ಯಾರಿಂದ ಶುರುಮಾಡಬಹುದು ಎಂದು ಯೋಚಿಸುತ್ತಾ ದೂರದಲ್ಲಿ ಕಾಣಿಸುವ ಬೋಳು ಬೋಳು ಗುಡ್ಡದತ್ತ ಕಣ್ಣು ಹಾಯಿಸಿದ ಚಿರಾಯು. ತಾನು ನಲವತ್ತು ವರುಷಗಳ ಹಿಂದೆ ನೋಡಿದ ಹಾಗೇ ಈಗಲೂ ಇದೆ. ಅದೇ ಪಾಳು ಗುಡಿ, ಅದೇ ಒಂಟಿಮರ. ಇದ್ದಕ್ಕಿದ್ದಂತೆ ಆ ಮರದಡಿಯಲ್ಲಿ ವಿಜಯ ಲಕ್ಷ್ಮಿ ಕಾಣಿಸಿಕೊಳ್ಳುತ್ತಾಳೆ. ರೆಂಜೆ ಮರದಡಿಯಲ್ಲಿ ಹೂವು ಹೆಕ್ಕುವ ಜಾಹ್ನವಿ ಕಣ್ಮುಂದೆ ಮೂಡುತ್ತಾಳೆ. ಅದೇ ರೆಂಜೆ ಮರಕ್ಕೆ ನೇಣುಹಾಕಿಕೊಂಡು ಸತ್ತ ಶಾನುಭೋಗರ ಹೆಂಡತಿಯ ಹಸಿರು ಸೀರೆ ನೆನಪಿಗೆ ಬರುತ್ತದೆ. ಅಷ್ಟು ದಪ್ಪದ ಹೆಂಗಸು ಮರ ಹತ್ತಿ ನೇಣು ಹಾಕಿಕೊಂಡದ್ದಾದರೂ ಹೇಗೆ ಅನ್ನುವ ಪ್ರಶ್ನೆ ಆವತ್ತು ಯಾರನ್ನೂ ಕಾಡಿರಲೇ ಇಲ್ಲವಲ್ಲ ಅಂದುಕೊಳ್ಳುತ್ತಾ ಚಿರಾಯು ನೋಟ್‌ಪ್ಯಾಡ್ ಕೈಗೆತ್ತಿಕೊಂಡ.
ಚಿರಾಯುವಿಗೆ ಕಾದಂಬರಿ ಬರೆದು ಮುಗಿಸಲು ಬಾಕಿ ಉಳಿದಿರುವುದು ಇಪ್ಪತ್ತೆಂಟು ದಿನಗಳು ಮಾತ್ರ. ಅಷ್ಟರಲ್ಲಿ ಮುಗಿಸದೇ ಹೋದರೆ ಅಗ್ರಿಮೆಂಟ್ ಮುಗಿದುಹೋಗುತ್ತದೆ. ಒಪ್ಪಂದ ಮುರಿದುಹೋದರೆ ಪೆಂಗ್ವಿನ್ ಸಂಸ್ಥೆ ಕೊಟ್ಟಿರುವ ಆರು ಲಕ್ಷ ರುಪಾಯಿ ಅಡ್ವಾನ್ಸನ್ನು ವಾಪಸ್ಸು ಕೊಡಬೇಕು. ಅದಕ್ಕಿಂತ ದೊಡ್ಡ ನಷ್ಟವೆಂದರೆ ಒಪ್ಪಂದದ ಪ್ರಕಾರ ಬರಬೇಕಾದ ಇಪ್ಪತ್ತನಾಲ್ಕು ಲಕ್ಷ ರುಪಾಯಿಯೂ ಕೈ ಬಿಟ್ಟು ಹೋಗುತ್ತದೆ. ಹಾಗಂತ ಏನೇನೋ ಬರೆದು ಕೊಡುವಂತಿಲ್ಲ. ಅಂತಾರಾಷ್ಟ್ರೀಯ ಸಾಹಿತ್ಯ ವಲಯದಲ್ಲಿ ತನ್ನ ಕಾದಂಬರಿ ಚರ್ಚೆಯಾಗುತ್ತದೆ. ಹಾಗೆ ಚರ್ಚೆಗೆ ಬಂದಾಗ ತನ್ನ ಕಾದಂಬರಿ ಜಗತ್ತಿನ ಇತರೇ ಕಾದಂಬರಿಕಾರರ ಸಾಲಲ್ಲಿ ನಿಲ್ಲುವಂತಾಗಬೇಕು. ತನ್ನ ಸರೀಕರ ಎದುರು ತಾನು ನಿಕೃಷ್ಠ ಅನ್ನಿಸಿಕೊಳ್ಳಬಾರದು.
ವಿಚಾರವಾದ ಕಡಿಮೆ ಇರಲಿ, ರೋಚಕವಾದ ಘಟನೆಗಳಿರಲಿ,ಅವಮಾನಿತನಾದದ್ದು, ಪ್ರೇಮರಾಹಿತ್ಯ. ಹಿಂಸೆ, ಹೆಣ್ಣಿನ ಶೋಷಣೆ, ಹೆಣ್ಣು ಅನುಭವಿಸುವ ಯಾತನೆ, ಅವಳು ಸುಖಕ್ಕಾಗಿ ಹಾತೊರೆಯುವುದು, ಗಂಡಿನ ಅಹಂಕಾರವನ್ನು ಆಕೆ ಮೀರುವುದಕ್ಕೆ ಮಾಡುವ ಪ್ರಯತ್ನ - ಇವೆಲ್ಲ ಕಾದಂಬರಿಯಲ್ಲಿ ದಟ್ಟವಾಗಿ ಬರಲಿ. ಕಾದಂಬರಿಯನ್ನು ಜೀವಂತವಾಗಿಡುವುದು ಇಂಥ ಸಂಗತಿಗಳೇ. ಅವು ನಿಮ್ಮ ಅನುಭವವೇ ಆಗಿರಬೇಕು ಅಂಥೇನಿಲ್ಲ. ಯಾರ ಅನುಭವವಾದರೂ ಸರಿಯೇ, ಕಂಡದ್ದು, ಕೇಳಿದ್ದು ಎಲ್ಲಾ ಸೇರಿಸಿ ಬರೆಯಿರಿ. ಭಾರತೀಯತೆ ಮುಖ್ಯ. ನಿಮ್ಮ ಊರು, ನಿಮ್ಮ ನೆಲ, ನೆಲೆ ಅದರಲ್ಲಿ ಮೂಡಬೇಕಾದದ್ದು ಮುಖ್ಯ ಅಂತ ವಿವರಿಸಿದ್ದಳು ಶ್ರದ್ಧಾ. ಆಕೆ ಪೆಂಗ್ವಿನ್ ಇಂಡಿಯಾದ ಏಜಂಟು. ಒಳ್ಳೆಯ ಕಾದಂಬರಿಕಾರರನ್ನು ಹುಡುಕಿ ಅವರಿಂದ ಕಾದಂಬರಿ ಬರೆಸುವುದು ಅವಳ ಕೆಲಸ.
ಹಾಗಂತ ತನಗೇ ಬುದ್ಧಿ ಹೇಳಲಿಕ್ಕೆ ಬರುತ್ತಾಳಲ್ಲ, ಅವಳು ಹೇಳಿದ ಹಾಗೆ ಕಾದಂಬರಿ ಯಾಕೆ ಬರೀಬೇಕು ನಾನು ಎಂದು ಚಿರಾಯು ರೇಜಿಗಿಗೊಳ್ಳುತ್ತಾ ಎದ್ದು ನಿಂತ. ಅವನು ಎದ್ದು ನಿಂತದ್ದನ್ನು, ಚಡಪಡಿಸುತ್ತಿರುವುದನ್ನೂ, ಬರೆಯದೇ ಅರ್ಧ ದಿನ ಸುಮ್ಮನೆ ಕೂತಿದ್ದನ್ನೂ ಹೊರಗೆ ಕೂತು ನೋಡುತ್ತಿದ್ದ ಶೇಷು ಒಳಗೆ ಬಂದು ನಿಂತ. ಚಿರಾಯು ಕಣ್ಣಲ್ಲೇ ಸೂಚಿಸಿದ ಹಾಗೆ ಒಂದು ಲಾರ್ಜ್ ವಿಸ್ಕಿಗೆ ಸ್ವಲ್ಪ ಸೋಡ, ಸ್ವಲ್ಪ ನೀರು ಬೆರೆಸಿ ತಂದು ಅವನ ಕೈಲಿಟ್ಟ.
ಚಿರಾಯು ಮೊದಲ ಸಿಪ್ ಹೀರುತ್ತಾ ಶೇಷುವಿಗೋ ತನಗೋ ಎನ್ನುವುದು ಇನ್ನೂ ಸ್ವಷ್ಟವಾಗದವನಂತೆ ಹೇಳಿಕೊಂಡ:
ಯಾಮಿನಿಗೆ ಬರೋದಕ್ಕೆ ಹೇಳಬೇಕು.’